ಉತ್ತರ ಕರ್ನಾಟಕ ನೀರಾವರಿಗೆ ₹50 ಸಾವಿರ ಕೋಟಿ ನೀಡಲು ಬೆಲ್ಲದ ಆಗ್ರಹ

KannadaprabhaNewsNetwork |  
Published : Sep 24, 2026, 03:00 AM IST
ಕಾರ್ಯಕ್ರಮವನ್ನು ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಶಂಕರ್ ರಾವ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಬರಗಾಲದ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡಿದೆ. ಭೀಕರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಬರಪರಿಹಾರ ಯೋಜನೆಗಳನ್ನು ಘೋಷಿಸಬೇಕು. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50 ಸಾವಿರ ಕೋಟಿ ರು. ಅನುದಾನ ನೀಡಬೇಕು ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯ ಸರ್ಕಾರ ಬರಗಾಲದ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡಿದೆ. ಭೀಕರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಬರಪರಿಹಾರ ಯೋಜನೆಗಳನ್ನು ಘೋಷಿಸಬೇಕು. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50 ಸಾವಿರ ಕೋಟಿ ರು. ಅನುದಾನ ನೀಡಬೇಕು ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಆಗ್ರಹಿಸಿದರು.

ಬುಧವಾರ ವಿಶೇಷ ಅಧಿವೇಶನದಲ್ಲಿ ನಡೆದ ಬರಗಾಲದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಶೇ.36ರಷ್ಟು ಮಳೆಕೊರತೆ ಉಂಟಾಗಿ ಬರ ಆವರಿಸಿದೆ. ರಾಜ್ಯ ಸರ್ಕಾರ ನೂರಕ್ಕೂ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಸುಮಾರು 37 ಸಾವಿರ ಕೋಟಿ ಬೆಳೆ ನಷ್ಟ ಉಂಟಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆರ್ಥಿಕತೆ ಕುಸಿದಿದೆ. ನಾಲ್ಕು ತಿಂಗಳ ಹಿಂದೆಯೇ ಬರಗಾಲದ ಮುನ್ಸೂಚನೆ ಸಿಕ್ಕರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 37 ಲಕ್ಷ ಕೊಳವೆ ಬಾವಿಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಿಲ್ಲ. ಬೆಳೆ ವಿಮೆ ಬಗ್ಗೆ ಹೇಳಲಿಲ್ಲ. ರಾಜ್ಯದಲ್ಲಿ ಶೇ.70ರಷ್ಟು ಕುಟುಂಬಗಳು ಕೃಷಿ ಆಧರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಪದಗ್ರಹಣ ಮಾಡಿದಾಗ ಸಂಪುಟದಲ್ಲಿ ಕೃಷಿ ಸಚಿವರೇ ಇರಲಿಲ್ಲ. ರೈತರ ಸಂಕಷ್ಟ, ಬರಗಾಲ ಅವರ ಕಣ್ಣಿಗೆ ಕಾಣಿಸಲೇ ಇಲ್ಲ ಎಂದು ಹರಿಹಾಯ್ದರು.

ಸೆಪ್ಟೆಂಬರ್‌ ಕೊನೆಯಲ್ಲಿ ಬರಗಾಲ ನೆನಪಾಗಿ ವಿಶೇಷ ಆಧಿವೇಶನ ಕರೆಯಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಬರಗಾಲ ನಿರ್ವಹಣೆಗೆ ಸಮರ್ಪಕ ಅನುದಾನ ನೀಡಿಲ್ಲ. ಮೋಡವೇ ಇಲ್ಲದ ಸಂದರ್ಭದಲ್ಲಿ 28 ಕೋಟಿ ರು. ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಿ ಆ ಹಣವನ್ನು ಗುಳಂ ಮಾಡಲಾಗಿದೆ. ಇದು ಯಾರ ಹಣ ಎಂದು ಪ್ರಶ್ನಿಸಿದರು.

ಕೋವಿಡ್‌ ಸಂದರ್ಭದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಡಿ.ಕೆ.ಶಿವಕುಮಾರ್‌ ಈಗ ಏನು ಮಾಡಿದ್ದಾರೆ? ತಮಿಳುನಾಡಿನ ಅನಾನುಭವಿ ಮುಖ್ಯಮಂತ್ರಿ ಅಲ್ಲಿನ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡರು. ನೀರು ಸಿಗದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‌ ನೀಡಿದರು. ನಮ್ಮ ಮುಖ್ಯಮಂತ್ರಿ ಜಲಾಶಯಗಳಲ್ಲಿ ನೀರಿನ ಸಂಗ್ರಹವಿಲ್ಲ. ಬಿತ್ತನೆ ಮಾಡಬೇಡಿ ಎಂದು ಹೇಳಿದರು. ತಮಿಳುನಾಡಿಗೆ ನೀರು ಹರಿಸಿದರು. ಕಾವೇರಿ ನೀರಿನ ಬಗ್ಗೆ ಕೋರ್ಟ್‌ಗೆ ಸರಿಯಾಗಿ ಮನವರಿಕೆ ಮಾಡಲಿಲ್ಲ. ಕೋರ್ಟ್‌ ತಮಿಳುನಾಡು ಪರ ಆದೇಶ ನೀಡಿತು ಎಂದು ಕಿಡಿಕಾರಿದರು.

ಸರ್ಕಾರದ ವಿತ್ತೀಯ ಕೊರತೆ ಮೀರಿ ಸಾಲ ಮಾಡಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಜತೆಗೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳನ್ನು ಕೊಡಬೇಕು. ರೈತರು ಉಳಿದರೆ ಕೃಷಿ ಉಳಿಯಲಿದೆ. ಕೃಷಿ ಉಳಿದರೆ ಹಳ್ಳಿಗಳು ಉಳಿಯುತ್ತವೆ. ಹಳ್ಳಿಗಳು ಉಳಿದರೆ ಕರ್ನಾಟಕ ಉಳ್ಳಿಯಲಿದೆ. ರಾಜಕೀಯ ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ಬರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ತಕ್ಷಣ, ಮಧ್ಯಮ, ಧೀರ್ಘಕಾಲದ ಪರಿಹಾರ ಯೋಜನೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತರ ಕರ್ನಾಟಕ ನೀರಾವರಿಗೆ 50 ಸಾವಿರ ಕೋಟಿಗೆ ಅರವಿಂದ ಬೆಲ್ಲದ ಆಗ್ರಹ
ರೇಬಿಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಜಾಗೃತಿ ಇರಲಿ:ಡಾ. ಹನುಮಂತ ನಾವಿ