ಕೆ.ಎಂ. ಮಂಜುನಾಥ್
ಬಳ್ಳಾರಿ: 2023ನೇ ವರ್ಷ ಜಿಲ್ಲೆಯ ಜನರಿಗೆ ಸಿಹಿಗಿಂತ ಕಹಿ ಅನುಭವ ನೀಡಿದ್ದೇ ಹೆಚ್ಚು. ಎಂದಿನಂತೆ ಜಿಲ್ಲೆಯನ್ನು ಕಾಡಿದ ಬರಗಾಲ. ನಾಡಿನ ಖ್ಯಾತವೆತ್ತ ಕಲಾವಿದರ ವಿಧಿವಶ. ಸರಣಿ ಅಪಘಾತಗಳಿಂದ ಸಾವು ನೋವುಗಳ ಆಕ್ರಂದನ. ಈ ವರ್ಷದಲ್ಲಿ ಹೆಚ್ಚಾಗಿತ್ತು. ಇನ್ನು ರಾಜಕೀಯ ವಲಯದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳಾದವು. ವರ್ಷಾಂತ್ಯದವರೆಗೂ ಅಭಿವೃದ್ಧಿಗೆ ಗಣಿಜಿಲ್ಲೆ ಹೆಚ್ಚು ತೆರೆದುಕೊಳ್ಳಲಿಲ್ಲ.ಗಣಿ ಜಿಲ್ಲೆ ಬಳ್ಳಾರಿ 2023ನೇ ಸಾಲಿನಲ್ಲೂ ಬರಗಾಲ ತುತ್ತಾಗಿತು. ಜಿಲ್ಲೆಯ ಐದು ತಾಲೂಕುಗಳ ರೈತರು ಕೃಷಿ ವೆಚ್ಚದಷ್ಟೂ ಫಸಲು ಸಿಗದೆ ಸಾಲಗಾರರಾದರು. ಮುಂಗಾರು ಹಂಗಾಮಿನ ಬೆಳೆಗಳು ಕೈ ದಕ್ಕದಾದವು. ಮುಂಗಾರಿನಲ್ಲಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಲಿಲ್ಲವಾದರೂ ನೀರಿಲ್ಲದೆ ಬೆಳೆ ಒಣಗಿ ಹೋದವು. ಒಟ್ಟು 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆಯಿತು. ಈ ಪೈಕಿ 68,096 ಹೆಕ್ಟೇರ್ ಕೃಷಿ ಮತ್ತು 7381 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಯಿತು. ಜಿಲ್ಲೆಯಲ್ಲಿ ಒಟ್ಟು ₹569.23 ಕೋಟಿಗಳಷ್ಟು ಬೆಳೆಹಾನಿಯಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿತು. ಬಳ್ಳಾರಿ ಜೀನ್ಸ್ ಉದ್ಯಮ- ಸಿದ್ಧ ಉಡುಪು ಉದ್ಯಮಕ್ಕೂ ಬರದ ಛಾಯೆ ಆವರಿಸಿತು. ಕೋಟ್ಯಂತರ ರು. ನಷ್ಟವನ್ನು ಈ ಉದ್ಯಮ ಎದುರಿಸಿತು.
ಬೆಳಗಲ್ಲು ವೀರಣ್ಣ ವಿಧಿವಶ: ತೊಗಲುಗೊಂಬೆಯಾಟದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿವೆತ್ತಿದ್ದ ಜಿಲ್ಲೆಯ ನಾಡೋಜ ಬೆಳಗಲ್ಲು ವೀರಣ್ಣ (88) ಅವರು ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಬಾಲ್ಯದಿಂದಲೇ ರಂಗಭೂಮಿ ನಂಟು ಹೊಂದಿದ್ದ ವೀರಣ್ಣನವರು ರಂಗಭೂಮಿ ಹಾಗೂ ತೊಗಲುಗೊಂಬೆ ಎರಡು ಕ್ಷೇತ್ರದಲ್ಲಿ ಪಳಗಿದ್ದರು. ತೊಗಲುಗೊಂಬೆಯನ್ನು ವೃತ್ತಿ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದ ವೀರಣ್ಣನವರು ತಮ್ಮ ಇಡೀ ಬದುಕನ್ನು ಮರೆಯಾಗುತ್ತಿರುವ ಕಲಾ ಪ್ರಕಾರದ ಉಳಿವಿಗೆ ಶ್ರಮಿಸಿದರು. ಪುತ್ರನೊಂದಿಗೆ ಕಾರಿನಲ್ಲಿ ತೆರಳುತ್ತಿರುವ ವೇಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಿಕೇರಿ ಬಳಿ ಅಪಘಾತದಲ್ಲಿ ಕೊನೆಯುಸಿರೆಳೆದರು. ಗೂಳ್ಯಂನ ಗಡಿನಾಡ ಕಲಾವಿದ ಶರಣಯ್ಯಸ್ವಾಮಿ(85) ಅವರು ವಯೋಸಹಜ ಕಾಯಿಲೆಯಿಂದ ಸಾವಿಗೀಡಾದರು.ಶಂಕಿತರ ಬಂಧನ: ಈ ವರ್ಷದ ಕೊನೆಯ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿ, ಬಳ್ಳಾರಿಯ ಮೂಲದ ಇಬ್ಬರನ್ನು ಯುವಕರನ್ನು ಬಂಧಿಸಿತು. ಈ ಮೂಲಕ ಅಕ್ರಮ ಗಣಿಗಾರಿಕೆಗೆ ಅಪಕೀರ್ತಿಗೆ ಒಳಗಾಗಿದ್ದ ಬಳ್ಳಾರಿ ಜಿಲ್ಲೆ ಭಯೋತ್ಪಾದನೆ ಚಟುವಟಿಕೆ ಮೂಲಕ ದೇಶದ ಗಮನ ಸೆಳೆಯಿತು. ಮಿನಾಜ್ ಅಲಿಯಾಸ್ ಮೊಹಮದ್ ಹುಸೇನ್ ಎಂಬ ಶಂಕಿತ ಉಗ್ರರು ಬಂಧಿತರಾದರು.
21 ಜನ ಸಾವು: ಮೇ 29ರಂದು ಮೈಸೂರು ಬಳಿ ಕೊಳ್ಳೆಗಾಲ ರಸ್ತೆಯಲ್ಲಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ 11 ಜನ ಅಸುನೀಗಿದರು. ಘಟನೆ ಮಾಸುವ ಮುನ್ನವೇ ಜೂನ್ ತಿಂಗಳಲ್ಲಿ ಹೊಸಪೇಟೆ ತುಂಗಭದ್ರಾ ಜಲಾಶಯದ ಬಳಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ 10 ಜನ ಬಳ್ಳಾರಿಗರು ಅಸುನೀಗಿದರು. ಮಿತ್ತಲ್, ಬ್ರಹ್ಮಿಣಿ ಸೇರಿದಂತೆ ವಿವಿಧ ಕಂಪನಿಗಳಿಂದ ಭೂ ಪರಿಹಾರಕ್ಕಾಗಿ ಕುಡಿತಿನಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕಳೆದ ಒಂದು ವರ್ಷದಿಂದ ಕುಡಿತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇತ್ತ ಚಿತ್ತ ಹರಿಸಿಲ್ಲ.ರಾಜಕೀಯ ಬೆಳವಣಿಗೆ: ಮಾ. 29ರಂದು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದು ರಾಜ್ಯದಲ್ಲಿಯೇ ಅತಿ ಸಣ್ಣ ವಯಸ್ಸಿನ ಮಹಿಳಾ ಪಾಲಿಕೆ ಸದಸ್ಯೆ ತ್ರಿವೇಣಿ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ. 28ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮತಯಾಚಿಸಿದರು. ಮೇ 5ರಂದು ಪ್ರಧಾನಿ ನರೇಂದ್ರ ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ, ಮತ ಯಾಚನೆ ಮಾಡಿದರು.
ಮೇ 8ಕ್ಕೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಬಳ್ಳಾರಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಮತ ಯಾಚನೆಮಾಡಿದರು. ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆದು ಜಿಲ್ಲೆಯ ಐದೂ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತು. ಬಿ. ನಾಗೇಂದ್ರ ಜಿಲ್ಲಾ ಸಚಿವರಾದರು. ಈ ಚುನಾವಣೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕೆಆರ್‌ಪಿ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು. ಒಂದಷ್ಟು ಸಂತಸ- ಅಭಿವೃದ್ಧಿ: ನೂತನ ಜಿಲ್ಲಾಡಳಿತ ಭವನ ಉದ್ಘಾಟನೆಗೊಂಡಿತು. 2023ರ ಜ. 4ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.ವಿಮ್ಸ್ ಆವರಣದಲ್ಲಿ 400 ಹಾಸಿಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ, ಅಧಿಕಾರಿಗಳು, ನೌಕರರ ವಸತಿ ಗೃಹಗಳ ಲೋಕಾರ್ಪಣೆ, ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆಗೊಂಡಿತು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ 11ನೇ ಘಟಿಕೋತ್ಸವದಲ್ಲಿ ಸಾಧಕ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ನವದೆಹಲಿಯ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರೀಸರ್ಚ್ ಅಧ್ಯಕ್ಷ ಡಾ. ಜೆ.ಕೆ. ಬಸವರಾಜ್, ರಾಯಚೂರಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ, ಸಮಾಜ ಸೇವಕ ಹಿರೇಹಾಳ್ ಇಬ್ರಾಹಿಂ ಬಾಬು ಅವರಿಗೆ ಮರಣೋತ್ತರವಾಗಿ ಹಾಗೂ ಹಿಂದೂಸ್ತಾನಿ ಗಾಯಕ ಕೆ. ವೆಂಕಟೇಶ್ ಕುಮಾರ್ ಗವಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.ಪ್ರಯಾಣಿಕರ ಬಹುದಿನಗಳ ನಿರೀಕ್ಷೆಯ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್‌ಗೆ ಚಾಲನೆ ದೊರೆಯಿತು.