ಬಳ್ಳಾರಿ: ಕಾಂಗ್ರೆಸ್ ಭದ್ರಕೋಟೆ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಖಚಿತ ಎಂದು ಸಮೀಕ್ಷೆ ಹೇಳಿದೆ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದು, ಗೆದ್ದು ಲೋಕಸಭೆ ಪ್ರವೇಶಿಸುವುದು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಹೇಳಿದರು.ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಚುನಾಯಿಸುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.ಜಿಲ್ಲೆಯ ಜನರ ನಿರೀಕ್ಷೆಯಂತೆಯೇ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ದೇಶದಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲಿದೆ. ಬಿಜೆಪಿ ದುರಾಡಳಿತದಿಂದ ಜನರು ರೋಸಿ ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನರು ಮತದಾನ ಮಾಡಲಿದ್ದಾರೆ ಎಂದರು.ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಿಂದ ನಮಗ್ಯಾವ ನಷ್ಟವಿಲ್ಲ. 2008ರಲ್ಲಿ ಜನಾರ್ದನ ರೆಡ್ಡಿ ಬಲವಿದ್ದಾಗ್ಯೂ ನಾನೊಬ್ಬನೇ ಗೆದ್ದಿದ್ದೇನೆ. ರಿಪಬ್ಲಿಕ್ ಆಫ್ ಬಳ್ಳಾರಿ ಇದ್ದಾಗಲೇ ರೆಡ್ಡಿಯನ್ನು ಚುನಾವಣೆಯಲ್ಲಿ ಎದುರಿಸಿದ್ದೇನೆ. ನನಗಿದು ಹೊಸದಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ವರವಾಗಲಿವೆ. ನಾಡಿನ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಚುನಾಯಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಿದೆ ಎನ್ನುವ ಭಾವನೆ ಇಲ್ಲ. ಬಿಜೆಪಿಯ ಸದಾನಂದಗೌಡರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನವೂ ಸಿಗಲಿಲ್ಲ. ನಂತರ ರಾಜ್ಯದ ಮುಖ್ಯಮಂತ್ರಿಯಾದರು. ಯಾವುದನ್ನು ನಿರೀಕ್ಷೆ ಮಾಡಬಾರದು. ನಿರೀಕ್ಷೆಯಿಲ್ಲದೇ ಪಕ್ಷದ ಕೆಲಸ ಮಾಡಿದರೆ ಖಂಡಿತ ರಾಜಕೀಯ ಭವಿಷ್ಯ ಸಿಕ್ಕೇ ಸಿಗುತ್ತದೆ. ನನ್ನ ಮಗಳು ಸೌಪರ್ಣಿಕಾ ಸ್ಪರ್ಧೆ ಬದಲು ನಾನು ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದೆ. ಪಕ್ಷ ಹೇಳಿದಂತೆ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವೆ ಎಂದು ತಿಳಿಸಿದ ತುಕಾರಾಂ, ಏಪ್ರಿಲ್ 12ರಂದು ನಾಮಪತ್ರ ಸಲ್ಲಿಸಲಾಗುವುದು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.