ಪುರುಷ ಸಂತಾನಹರಣ ಯೋಜನೆಯಲ್ಲಿ ಬಳ್ಳಾರಿ ನೀರಸ ಪ್ರಗತಿ

KannadaprabhaNewsNetwork |  
Published : Aug 02, 2026, 02:00 AM IST
( ಈ ವರದಿಗೆ ಪೂರಕವಾಗಿ ಫೋಟೋ ಕಳಿಸಿರುವೆ. ಬಳಸಿಕೊಳ್ಳುವುದು)  | Kannada Prabha

ಸಾರಾಂಶ

ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಗದೇ ಉದ್ದೇಶ ವಿಮುಖವಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆಯ (ನೋ-ಸ್ಕಾಲ್ಪೆಲ್ ವ್ಯಾಸಕ್ಟಮಿ) ಪ್ರಗತಿ ತೀರಾ ನೀರಸವಾಗಿದೆ. ಈ ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಗದೇ ಉದ್ದೇಶ ವಿಮುಖವಾಗಿದೆ. ಕುಟುಂಬ ಕಲ್ಯಾಣ ಕಾರ್ಯಕ್ರಮದ ಪ್ರಮುಖ ಭಾಗವಾಗಿರುವ ಈ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ಬರೀ 12 ಜನರು ಮಾತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಇಲಾಖೆಯ ಅಧಿಕೃತ ಅಂಕಿ-ಅಂಶಗಳೇ ಖಚಿತಪಡಿಸುತ್ತವೆ.

ಹಿಂದೊಮ್ಮೆ ರಾಜ್ಯದಲ್ಲೇ ಉತ್ತಮ ಸಾಧನೆ ದಾಖಲಿಸಿದ್ದ ಬಳ್ಳಾರಿ ಜಿಲ್ಲೆ, ಈಗ ಈ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಪುರುಷರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಮಾತ್ರ ಕಾಣಿಸುತ್ತಿಲ್ಲ ಎಂಬುದು ಗಮನಾರ್ಹ.

ಈ ಹಿಂದೆ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಗೆ ವಯೋಮಿತಿಯ ಯಾವುದೇ ನಿರ್ಬಂಧ ಇರಲಿಲ್ಲ. ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದ 50 ವರ್ಷ ಮೇಲ್ಪಟ್ಟ ಪುರುಷರೂ ಸ್ವಯಂಪ್ರೇರಣೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಕರೆತಂದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಪರಿಣಾಮವಾಗಿ ಇಲಾಖೆಗೆ ನಿಗದಿಪಡಿಸಿದ್ದ ವಾರ್ಷಿಕ ಗುರಿಯನ್ನು ಸುಲಭವಾಗಿ ತಲುಪಲಾಗುತ್ತಿತ್ತು.

ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸರ್ಕಾರದಿಂದ ₹1,500 ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಲ್ಲಿ ಫಲಾನುಭವಿಗೆ ₹1,000 ಹಾಗೂ ಅವರನ್ನು ಕರೆತಂದ ಮಧ್ಯವರ್ತಿಗೆ ₹500 ನೀಡುವ ವ್ಯವಸ್ಥೆಯೂ ಇತ್ತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯವರ್ತಿಗಳ ಜಾಲವೂ ಸಕ್ರಿಯವಾಗಿತ್ತು. ಹತ್ತಾರು ನಿಮಿಷಗಳಲ್ಲಿ ಯಾವುದೇ ನೋವಿಲ್ಲದೇ ಪೂರ್ಣಗೊಳ್ಳುವ ಈ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮುಂದೆ ಬರುತ್ತಿದ್ದರು. ಆದರೆ, ಕಳೆದ ಐದಾರು ವರ್ಷಗಳಿಂದ 40 ವರ್ಷದೊಳಗಿನ ಪುರುಷರಿಗೆ ಮಾತ್ರ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ನಡೆಸಬೇಕು ಎಂಬ ನಿಯಮ ಜಾರಿಯಾದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕುಟುಂಬ ಪೂರ್ಣಗೊಂಡಿದ್ದರೂ 40 ವರ್ಷ ದಾಟಿದ ಪುರುಷರು ಶಸ್ತ್ರಚಿಕಿತ್ಸೆಗೆ ಅರ್ಹರಾಗದ ಕಾರಣ ಫಲಾನುಭವಿಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಪರಿಣಾಮವಾಗಿ ಇಲಾಖೆಯ ವಾರ್ಷಿಕ ಗುರಿ ಸಾಧನೆಯೂ ಸವಾಲಾಗಿ ಪರಿಣಮಿಸಿದೆ.

ಆರೋಗ್ಯ ತಜ್ಞರ ಪ್ರಕಾರ ನೋ-ಸ್ಕಾಲ್ಪೆಲ್ ವ್ಯಾಸಕ್ಟಮಿ ಅತ್ಯಂತ ಸುರಕ್ಷಿತ, ಸರಳ ಹಾಗೂ ಪರಿಣಾಮಕಾರಿ ಕುಟುಂಬ ನಿಯೋಜನಾ ವಿಧಾನವಾಗಿದೆ. ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಪೂರ್ಣಗೊಳ್ಳುತ್ತದೆ. ಚಿಕಿತ್ಸೆ ಬಳಿಕ ಅಲ್ಪ ವಿಶ್ರಾಂತಿ ಸಾಕಾಗುತ್ತಿದ್ದು, ಪುರುಷರ ದೈಹಿಕ ಸಾಮರ್ಥ್ಯ, ಲೈಂಗಿಕ ಜೀವನ ಅಥವಾ ದಿನನಿತ್ಯದ ಚಟುವಟಿಕೆಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಆದರೂ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಜಾಗೃತಿಯ ಕೊರತೆಯಿಂದ ಅನೇಕರು ಈ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ.

ಕುಟುಂಬ ಯೋಜನೆ ಎಂದರೆ ಮಹಿಳೆಯರ ಜವಾಬ್ದಾರಿ ಎಂಬ ಮನೋಭಾವ ಇನ್ನೂ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವುದು ಪುರುಷರ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತಿದೆ. ಇದರ ಪರಿಣಾಮವಾಗಿ ಮಹಿಳೆಯರೇ ಹೆಚ್ಚು ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದು ಆರೋಗ್ಯ ಇಲಾಖೆ ಅಂಕಿ-ಅಂಶಗಳಿಂದಲೂ ಸ್ಪಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮತ್ತೆ ಉತ್ತೇಜನ ನೀಡಬೇಕಾದರೆ ವ್ಯಾಪಕ ಜಾಗೃತಿ ಅಭಿಯಾನ, ತಪ್ಪು ಕಲ್ಪನೆಗಳ ನಿವಾರಣೆ ಹಾಗೂ ಅರ್ಹತಾ ನಿಯಮಗಳ ಮರುಪರಿಶೀಲನೆ ಅಗತ್ಯ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕುಟುಂಬ ಯೋಜನೆಯಲ್ಲಿ ಪುರುಷರ ಸಮಾನ ಹೊಣೆಗಾರಿಕೆಯನ್ನು ಸಮಾಜ ಒಪ್ಪಿಕೊಳ್ಳುವ ಮನೋಭಾವ ಬೆಳೆದಾಗ ಮಾತ್ರ ನೋ-ಸ್ಕಾಲ್ಪೆಲ್ ವ್ಯಾಸಕ್ಟಮಿ ಕಾರ್ಯಕ್ರಮಕ್ಕೆ ಮತ್ತೆ ಚೈತನ್ಯ ಸಿಗುವ ನಿರೀಕ್ಷೆ ಇದೆ.

ಎನ್‌ಎಸ್‌ವಿ ಯೋಜನೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. 40 ವರ್ಷದೊಳಗಿನವರು ಮಾತ್ರ ಯೋಜನೆಗೆ ಅರ್ಹರು ಎಂಬ ನಿಯಮ ಮಾಡಿರುವುದರಿಂದ ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿಲ್ಲ. ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡುವೆಯೂ ಎನ್‌ಎಸ್‌ವಿಗೆ ಜನಸ್ಪಂದನೆ ಸಿಗುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೀರೇಂದ್ರಕುಮಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆ: ಡಾ. ನಿಂಗು ಸೊಲಗಿ
ಶರಣ ಸಾಹಿತ್ಯ ಬದುಕಿಗೆ ದಾರಿದೀಪ: ಶಿವಕುಮಾರ ಗೌಡ ಪಾಟೀಲ