ಗದಗ: ಗದಗ-ಬೆಟಗೇರಿ ನಗರಸಭೆ ಆಡಳಿತದಲ್ಲಿ ಹಿಡಿತವೂ ಇಲ್ಲ, ಅಧಿಕಾರಿಗಳು ಯಾರ ಮಾತು ಕೇಳುವುದಿಲ್ಲ, ಅವರಿಗೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ ಎನ್ನುವ ಸಾರ್ವಜನಿಕರ ಜನಜನಿತ ಮಾತಿಗೆ ಉತ್ತಮ ಸಾಕ್ಷಿ ಎನ್ನುವಂತೆ ಕಳೆದ ಒಂದು ತಿಂಗಳಿನಿಂದ ಗದಗ ಬೆಟಗೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿರುವ ಬಳ್ಳಾರಿ ಅಂಡರ್ ಪಾಸ್ ಮಲೀನ ನೀರಿನಿಂದ ತುಂಬಿ ತುಳುಕುತ್ತಿದ್ದರೂ ಯಾರೂ ಇತ್ತ ಗಮನ ನೀಡುತ್ತಿಲ್ಲ.
ಆದರೆ ಅಧಿಕಾರಿಗಳು ಮಾತ್ರ ಚುನಾವಣೆಯ ನೆಪ ಹೇಳುತ್ತಾ ಕಾಲ ಹರಣ ಮಾಡಿದ ಹಿನ್ನೆಲೆಯಲ್ಲಿ ಇಂದು ನೀರು ವ್ಯಾಪಕ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ದ್ವಿಚಕ್ರ ವಾಹನ , ಕಾರ್ ಸಂಚರಿಸಲು ಸಾಧ್ಯವಾದಷ್ಟು ಮಲೀನ ನೀರು ನಿಂತಿದೆ, ಇದರಿಂದ ಅಂಡರ್ ಪಾಸ್ ಅಕ್ಕಪಕ್ಕದಲ್ಲಿಯೇ ಮನೆಗಳಿದ್ದರೂ 3 ರಿಂದ 4 ಕಿಮೀ ಸುತ್ತುವರಿದು ತಲುಪುವಂತಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಿಂದ ಎಪಿಎಂಸಿಗೆ ಬರುವ ರೈತರಿಗೆ ಅದರಲ್ಲಿಯೂ ಬೆಳಗಿನ ಜಾವವೇ ತರಕಾರಿ ಮಾರಾಟಕ್ಕೆ ವಾಹನಗಳಿಗೆ, ರೈತ ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ.
ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದು, ಅಧಿಕಾರಿಗಳು ಮಾತ್ರ ಈ ಸಮಸ್ಯೆ ಸರಿಪಡಿಸುವತ್ತ ಗಮನ ನೀಡುತ್ತಿಲ್ಲ, ಇನ್ನು ಗದಗ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಸಹಿತ ಈ ವಿಷಯದಲ್ಲಿ ಅದೇಕೋ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಹಾಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.