ಬೆಳ್ತಂಗಡಿ: ಗಾಳಿ, ಮಳೆಗೆ 131 ವಿದ್ಯುತ್‌ ಕಂಬ, ಮನೆಗಳಿಗೆ ಹಾನಿ, ಲಕ್ಷಾಂತರ ರು. ಹಾನಿ ಅಂದಾಜು

KannadaprabhaNewsNetwork |  
Published : Mar 14, 2025, 12:32 AM IST
ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾನಿ | Kannada Prabha

ಸಾರಾಂಶ

ಬೆಳ್ತಂಗಡಿ ತಾಲೂಕಿನಲ್ಲಿ ಬುಧವಾರ ಗಾಳಿಯೊಂದಿಗೆ ಸುರಿದ ವರ್ಷದ ಪ್ರಥಮ ಮಳೆಗೆ ಒಟ್ಟು 131 ವಿದ್ಯುತ್ ಕಂಬಗಳು ಧರಶಾಯಿಯಾಗಿವೆ. ಇದರಿಂದ ತಾಲೂಕಿನಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಮೆಸ್ಕಾಂಗೆ ಲಕ್ಷಾಂತರ ರು. ನಷ್ಟ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನಲ್ಲಿ ಬುಧವಾರ ಗಾಳಿಯೊಂದಿಗೆ ಸುರಿದ ವರ್ಷದ ಪ್ರಥಮ ಮಳೆಗೆ ಒಟ್ಟು 131 ವಿದ್ಯುತ್ ಕಂಬಗಳು ಧರಶಾಯಿಯಾಗಿವೆ. ಇದರಿಂದ ತಾಲೂಕಿನಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಮೆಸ್ಕಾಂಗೆ ಲಕ್ಷಾಂತರ ರು. ನಷ್ಟ ಉಂಟಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿ 8ರ ಬಳಿಕ ಮತ್ತೆ ಮುಂದುವರಿದು 11 ಗಂಟೆ ತನಕವು ಗುಡುಗು ಸಿಡಿಲಿನೊಂದಿಗೆ ಸುರಿಯಿತು.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಹಲವು ಗ್ರಾಮಗಳಲ್ಲಿ ಎಲ್‌ ಟಿ ಮತ್ತು ಎಚ್ ಟಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಇಲ್ಲಿ ಒಟ್ಟು 107 ವಿದ್ಯುತ್ ಕಂಬಗಳು ಮುರಿದಿದ್ದು 25 ಲಕ್ಷ ರು.ಗಿಂತ ಅಧಿಕ ನಷ್ಟ ಉಂಟಾಗಿದೆ. ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ 24 ವಿದ್ಯುತ್ ಕಂಬಗಳು ಮುರಿದಿದ್ದು 3.5 ಲಕ್ಷ ರು. ಗಿಂತ ಅಧಿಕ ನಷ್ಟ ಸಂಭವಿಸಿದೆ ಇದಲ್ಲದೆ ವಿದ್ಯುತ್ ತಂತಿ ಹಾಗೂ ಇತರ ಪರಿಸರಗಳಿಗೂ ಹಾನಿ ಉಂಟಾಗಿದೆ. ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದ ಪರಿಣಾಮ ಪರಿವರ್ತಕಗಳು ಹಾನಿಗೊಳಗಾಗಿವೆ.

ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಬುಧವಾರ ರಾತ್ರಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಗುರುವಾರ ಮಧ್ಯಾಹ್ನದ ಹೊತ್ತಿಗೆ ವಿದ್ಯುತ್ ಪ್ರತ್ಯಕ್ಷವಾಯಿತು. ಕಂಬಗಳು ಮುರಿದ ಸ್ಥಳಗಳಲ್ಲಿ ಮೆಸ್ಕಾಂ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಗಾಳಿ ಮಳೆಗೆ ತಾಲೂಕಿನಲ್ಲಿ ಸಾವಿರಾರು ಅಡಕೆ, ರಬ್ಬರ್ ಗಿಡಗಳು ಮುರಿದುಬಿದ್ದಿವೆ.

6 ಮನೆಗಳಿಗೆ ಹಾನಿ:

ಕೊಯ್ಯೂರು ಗ್ರಾಮದಲ್ಲಿ ರಭಸವಾಗಿ ಬೀಸಿದ ಗಾಳಿಗೆ ಆರು ಮನೆಗಳಿಗೆ ಹಾನಿ ಸಂಭವಿಸಿದೆ. ಇಂದಿನ ನೀಲಮ್ಮ, ಶಾಂತಾ,ಜಯಂತಿ, ಸಂಜೀವಿ,ಸರೋಜಿನಿ ಹಾಗೂ ಮೋಹಿನಿ ಆಚಾರ್ಯ ಎಂಬವರ ಮನೆಗಳು ಗಾಳಿ ಮಳೆಯಿಂದ ಹೆಚ್ಚಿನ ಹಾನಿಗೆ ಒಳಗಾಗಿವೆ.

ಹೊಸಂಗಡಿ ಗ್ರಾಮದ ಸುನ್ನಾ ಸಾಹೇಬ್, ಸುಂದರಿ, ಬದ್ರುನ್ನಿಸ ಅವರ ಮನೆಗಳ ಮೇಲೆ ಮರಗಳು ಉರುಳಿಬಿದ್ದು ಹಾನಿ ಉಂಟಾಗಿದೆ. ವೇಣೂರಿನ ಹಾಜಿರಾ ಎಂಬವರ ಮನೆಗೆ,ಮರೋಡಿ ಗ್ರಾಮದ ಅಂಗಡಿಬೆಟ್ಟು ಲಲಿತಾ ಅವರ ಮನೆಗಳ ಮೇಲೆ ಮರಬಿದ್ದು,

ಕುವೆಟ್ಟು ಗ್ರಾಮದ ಸುದೆಕ್ಕಾರು ಎಂಬಲ್ಲಿ ಸರೋಜಾ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಎಂಬಲ್ಲಿ ಶುಭೋದಯ ಎಂಬವರ ಮನೆಗೆ, ಪಡಂಗಡಿ ಪೊಯ್ಯಗುಡ್ಡೆ ಎಂಬಲ್ಲಿ ಸುಜಾತಾ, ಅಬುಸಾ, ತಸ್ಮೀನಾ, ಲಾಯಿಲ ಗ್ರಾಮದ ವಸಂತ ಜೋಗಿ, ಬಡೆಕೋಡಿಯ ಲಕ್ಷ್ಮಿ ಇವರ ಮನೆಗಳಿಗೆ ಬಜಿರೆಯ ಭಜನಾ ಮಂದಿರಕ್ಕೆ, ಕುವೆಟ್ಟಿನ ಪಿ.ಕೆ.ಆಲಿ ಅವರ ಮನೆಗೆ, ಕುಕ್ಕೇಡಿ ಗ್ರಾಮದ ಗೋಳಿಅಂಗಡಿ ಅಂಗನವಾಡಿಗೆ ಹಾಗೂ ಇಲ್ಲಿನ ಫೌಜಿಯಾ ಎಂಬವರ ಮನೆಗಳಿಗೆ ಗಾಳಿ, ಮಳೆಯಿಂದ ಹಾನಿ ಸಂಭವಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ