ಬೇಲೂರು ಸರ್ಕಾರಿ ಶಾಲಾ ಮಕ್ಕಳಿಂದ ಖಾಸಗಿ ಶಾಲೆಗೆ ಸೆಡ್ಡು: ಅರೇಹಳ್ಳಿ ಕಾಲೇಜು ಪ್ರಾಂಶುಪಾಲ ಪರಮಶಿವಪ್ಪ ಡಿ.ಎಂ.

KannadaprabhaNewsNetwork | Published : May 24, 2024 12:51 AM

ಸಾರಾಂಶ

ದುಬಾರಿ ವೆಚ್ಚದಲ್ಲಿ ಶಿಕ್ಷಣ ನೀಡುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರಿ ಕಾಲೇಜಿನ ಮಕ್ಕಳು ಸೆಡ್ಡು ಹೊಡೆದು ಉತ್ತಮ ಅಂಕವನ್ನು ಗಳಿಸಿರುತ್ತಾರೆ ಎಂದು ಅರೇಹಳ್ಳಿ ಕಾಲೇಜಿನ ಪ್ರಾಂಶುಪಾಲ ಪರಮಶಿವಪ್ಪ ಡಿ.ಎಂ. ಹೇಳಿದರು. ಬೇಲೂರಿನಲ್ಲಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿ ಆರಂಭ ಕುರಿತ ಸಭೆಯಲ್ಲಿ ಮಾಹಿತಿ ನೀಡಿದರು.

ಕಾಲೇಜಿನ ದ್ವಿತೀಯ ಪಿಯು ಫಲಿತಾಂಶ ಶ್ಲಾಘನೆ

ಕನ್ನಡಪ್ರಭ ವಾರ್ತೆ ಬೇಲೂರು

ದುಬಾರಿ ವೆಚ್ಚದಲ್ಲಿ ಶಿಕ್ಷಣ ನೀಡುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರಿ ಕಾಲೇಜಿನ ಮಕ್ಕಳು ಸೆಡ್ಡು ಹೊಡೆದು ಉತ್ತಮ ಅಂಕವನ್ನು ಗಳಿಸಿರುತ್ತಾರೆ. ಆದ್ದರಿಂದ ಪಟ್ಟಣದ ಹಾಗೂ ಸುತ್ತ ಮುತ್ತಲಿನ ವಿದ್ಯಾರ್ಥಿಗಳು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅರೇಹಳ್ಳಿ ಕಾಲೇಜಿನ ಪ್ರಾಂಶುಪಾಲ ಪರಮಶಿವಪ್ಪ ಡಿ.ಎಂ. ಹೇಳಿದರು.

ನಗರದಲ್ಲಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿ ಆರಂಭ ಕುರಿತ ಸಭೆಯಲ್ಲಿ ಮಾಹಿತಿ ನೀಡಿ, ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಇ ಫಲಿತಾಂಶದಲ್ಲಿ 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಕಲಾ ಹಾಗು ವಿಜ್ಞಾನ ವಿಭಾಗದಲ್ಲಿ ಶೇಕಡಾ 100 ರಷ್ಟು ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಕಡಾ 86 ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಶ್ಲಾಘಿಸಿದರು.

‘ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿಗೆ ಪ್ರಥಮ ಪಿಯುಸಿ ಕೋರ್ಸುಗಳ ಪ್ರವೇಶಾತಿ ಆರಂಭಗೊಂಡಿದ್ದು ಕೇವಲ ಸರ್ಕಾರಿ ಶುಲ್ಕವನ್ನು ಪಾವತಿಸುವ ಮೂಲಕ ಅನುಭವಿ ಪರಿಣಿತ ಉಪನ್ಯಾಸಕರಿಂದ ಉತ್ತಮ ಶಿಕ್ಷಣ ಪಡೆದು ಅತ್ಯುತ್ತಮ ಫಲಿತಾಂಶ ಪಡೆಯಿರಿ. ನಮ್ಮ ಕಾಲೇಜಿನಲ್ಲಿ ಕಲಾ,ವಿಜ್ಞಾನ ಹಾಗು ವಾಣಿಜ್ಯ ವಿಭಾಗಗಳಿದ್ದು ಸುಸರ್ಜಿತವಾದ ಕೊಠಡಿ, ಸೌಚಾಲಯ, ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಆಡಿಟೋರಿಯಂ, ಆಟದ ಮೈದಾನದೊಂದಿಗೆ ಅನುಭವ ಹೊಂದಿರುವ ಉಪನ್ಯಾಸಕ ವೃಂದದವರಿಂದ ಶಿಕ್ಷಣ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ಸೋಮನಾಥ್ ಮಾತನಾಡಿ, ಸರ್ಕಾರಿ ಕಾಲೇಜು ಎಲ್ಲಾ ಬಡ ಹಾಗು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವರದಾನವಿದ್ದಂತೆ, ಕಾಲೇಜಿನ ಅಭಿವೃದ್ಧಿಗಾಗಿ ಸರ್ಕಾರವು ಸುಮಾರು 5 ಕೋಟಿ ರು. ಅನುದಾನ ನೀಡಿದ್ದು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲದೆ ಸುಸರ್ಜಿತ ಕೊಠಡಿ, ಲ್ಯಾಬ್ ಹಾಗೂ ನುರಿತ ಉಪನ್ಯಾಸಕ ವೃಂದದವರು ಸೇರಿದಂತೆ ಎಲ್ಲ ಮೂಲ ಸೌಕರ್ಯ ಹೊಂದಿದೆ ಎಂದು ತಿಳಿಸಿದರು.

ಕಾಲೇಜಿನಲ್ಲಿ ಅತಿ ಕಡಿಮೆ ವಾರ್ಷಿಕ ಪ್ರವೇಶ ಶುಲ್ಕವಿದ್ದು, ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ವಿಶೇಷವಾಗಿ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಭಾಗವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಸುಮಾರು 5000 ರು.ವರೆಗೆ ಗೌರವಧನ ನೀಡಲು ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ ಸುತ್ತ ಮುತ್ತಲಿನ ವಿದ್ಯಾರ್ಥಿಗಳು ಪ್ರವೇಶ ಪಡೆದು ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಹಾಗು ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

Share this article