ಬ್ಯಾಡಗಿ: ಆಶ್ರಯ ನಿವೇಶನ ಹಂಚಿಕೆ ವಿಳಂಬ ಖಂಡಿಸಿ ಹಾಗೂ ಕೂಡಲೇ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ, ನೂರಾರು ಫಲಾನುಭವಿಗಳು ಪಟ್ಟಣದ ಆಶ್ರಯ ನಿವೇಶನ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಶುಕ್ರವಾರ ಬೆಳಗ್ಗೆಯೆ ಆಶ್ರಯ ಸಮಿತಿ ಕಚೇರಿಗೆ ಆಗಮಿಸಿದದ ನೂರಾರು ಫಲಾನುಭವಿಗಳು ನಿವೇಶನ ಹಂಚಿಕೆ ವಿಳಂಬ ಹಾಗೂ ಆಶ್ರಯ ಸಮಿತಿ ನಡೆಯನ್ನು ಖಂಡಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಪರಿದಾಬಾನು ನದಿಮುಲ್ಲ, “20 ವರ್ಷಗಳಿಂದ ಆಶ್ರಯ ನಿವೇಶನಕ್ಕಾಗಿ ಹೋರಾಟ ಜೊತೆಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಇನ್ನೆಷ್ಟು ದಿನಬೇಕು ನಿವೇಶನ ಹಂಚಿಕೆ ಮಾಡಲು? ನಿಮ್ಮ ಕಾಂಗ್ರೆಸ್ ಹಾಗೂ ಬಿಜೆಪಿ ಒಳಜಗಳ ಹಾಗೂ ಒಣ ಪ್ರತಿಷ್ಠೆಗೆ ನಾವೇಕೆ ಬಲಿಯಾಗಬೇಕು, ನಾವೇಕೆ ಬೀದಿಯಲ್ಲೇ ಬದುಕಬೇಕು? ನಿಮ್ಮ ಪ್ರತಿಷ್ಠೆ ಬಿಟ್ಟು ಕೂಡಲೇ ನಿವೇಶನ ಹಂಚಿಕೆ ಮಾಡಿ, ಇಲ್ಲದೇ ಹೋದಲ್ಲಿ ನಾವು ಇಲ್ಲಿಂದ ತೆರಳುವುದಿಲ್ಲ” ಎಂದು ಕಣ್ಣೀರಿಟ್ಟರು.ಪಾಂಡುರಂಗ ಸುತಾರ ಮಾತನಾಡಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಪ್ ಎರಿಸೀಮೆ ಹಲವಾರು ಬಾರಿ ಪತ್ರಿಕಾ ಹೇಳಿಕೆ ನೀಡಿ ಶೀಘ್ರದಲ್ಲೇ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳುತ್ತಿದ್ದರೂ, ಇಲ್ಲಿವರೆಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಹಾಗೂ ಫಲಾನುಭವಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡರ ರಾಜಕೀಯ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದೀರಾ.? ಎಲ್ಲ ವಾರ್ಡಗಳ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿನ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಆಶ್ರಯ ಸಮಿತಿಯ ಬೆನ್ನು ಬಿದ್ದಿದ್ದಾರೆಯೆ.? ಎಂಬ ಅನುಮಾನ ಕಾಡುತ್ತಿದೆ. ಕೂಡಲೇ ಹಂಚಿಕೆ ಮಾಡಿ ಸಮಸ್ಯೆಗೆ ತೆರೆ ಎಳೆಯಿರಿ ಇಲ್ಲದೇ ಹೋದಲ್ಲಿ ಮುಂದಿನ ಹೋರಾಟ ಬೇರೆ ರೂಪ ಪಡೆದುಕೊಳ್ಳಲಿದೆ ಎಂದರು.ಗುತ್ತೆಮ್ಮ ಮಾಳಿ ಮಾತನಾಡಿ, ಈ ಹಿಂದಿನ ಎಲ್ಲ ಪುರಸಭೆ ಸದಸ್ಯರು ತಮ್ಮ ವಾರ್ಡನಲ್ಲಿನ ಫಲಾನುಭವಿಗಳನ್ನು ಆಯ್ಕೆ ಮಾಡಲು ಒತ್ತಡ ಹಾಕುತ್ತಿರುವುದು ಇದೀಗ ರಹಸ್ಯವಾಗಿ ಉಳಿದಿಲ್ಲ, ಅವರನ್ನು ಓಲೈಕೆ ಮಾಡಲು ನಿಜವಾ ದ ಅರ್ಹರನ್ನು ಕಡೆಗಣಸಿದ್ದೇ ಆದಲ್ಲಿ ಈ ಆಯ್ಕೆ ಪ್ರಕ್ರಿಯೆ ಯಾವತ್ತು ಮುಗಿಯದ ಕಥೆಯಾಗಲಿದೆ. ನಿಮ್ಮ ರಾಜಕೀಯ ಒಳಜಗಳಕ್ಕೆ ನಿಜವಾದ ಬಡವರ ನಿವೇಶನ ವಂಚಿತರಾಗಬಾರದು, ಇದನ್ನ ಅರಿತುಕೊಂಡು ಹಿಂದೆ ಮಾಡಿದ ತಪ್ಪನ್ನು ಮಾಡದೇ ನಿವೇಶನ ಹಂಚಿಕೆ ಮಾಡಿ, ಅನೇಕ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಮಾನವೀಯತೆ ತೋರುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯ ದುರ್ಗೆಶ ಗೋಣೆಮ್ಮನವರ, ರತ್ನವ್ವ ಕಮ್ಮಾರ, ಮುಬೀನಾ ಬಾಣಾವರ, ಶೇಹನಾಜ್ ಮೆಡ್ಲೇರಿ, ಜಮಾಲಬಿ ನದಾಫ್, ರತ್ನವ್ವ ಮುದು ಕಮ್ಮ ನವರ, ಶಾಂತವ್ವ ಕುಸಗೂರು, ಬಿಬಿಜಾನ್ ನದಾಫ್, ಶಾಂತವ್ವ ಪಾಟೀಲ, ಫಾತಿಮಾ ಸಯ್ಯದ್, ಸಾವಿತ್ರಿ ಕೇರಗೋಡ್, ರೇಖಾ ಬ್ಯಾಡಗಿ, ಕರಬಸಮ್ಮ ಮಡಿವಾಳರ, ಜ್ಯೋತಿ ದುರುಮುರುಗೇರ, ಪ್ರೇಮವ್ವ ದೊಡ್ಡಮನಿ, ದ್ಯಾಮವ್ವ ದುರು ಮುರುಗೇರ, ಮುತ್ತವ್ವ ದುರುಮುರುಗೇರ, ಯಾಸ್ಮಿನ್ ಕಬ್ಬೂರು, ತಿಪ್ಪವ್ವ ದುರುಮುರುಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಭರವಸೆ ಬಳಿಕ ಪ್ರತಿಭಟನೆ ವಾಪಸ್