ಪಿಎಂ ಸ್ವನಿಧಿ ಸಾಲದಿಂದ ಅನುಕೂಲ: ಅಕ್ಕಮಹಾದೇವಿ ದಿವಟರ

KannadaprabhaNewsNetwork | Published : Jul 28, 2024 2:03 AM

ಸಾರಾಂಶ

ಎಲ್ಲ ಬೀದಿ ವ್ಯಾಪಾರಸ್ಥರು ಯೋಜನೆಯ ಲಾಭ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಮುಂದಾಗಬೇಕು.

ಪಿಎಂ ಸ್ವನಿಧಿ ಯೋಜನೆಯ ಜಾಗೃತಿ ಕಾರ್ಯಕ್ರಮದಲ್ಲಿ ಡೇ ನಲ್ಮ್ ಅಧಿಕಾರಿ

ಕನ್ನಡಪ್ರಭ ವಾರ್ತೆ ಕುಕನೂರು

ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಎಲ್ಲ ಬೀದಿ ವ್ಯಾಪಾರಸ್ಥರು ಯೋಜನೆಯ ಲಾಭ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಮುಂದಾಗಬೇಕು ಎಂದು ಡೇ ನಲ್ಮ್ ಅಧಿಕಾರಿ ಅಕ್ಕಮಹಾದೇವಿ ದಿವಟರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಡೇ ನಲ್ಮ ಅಭಿಯಾನ ಬೆಂಗಳೂರು, ಜಿಲ್ಲಾಡಳಿತ ಕೊಪ್ಪಳ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೊಪ್ಪಳ, ಪಪಂ ಕುಕನೂರು ಹಾಗೂ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ ಕುಷ್ಟಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಕುಂತಳ ನಗರದಲ್ಲಿ ಹಮ್ಮಿಕೊಂಡ ಪಿಎಂ ಸ್ವನಿಧಿ ಯೋಜನೆಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಬೀದಿ ವ್ಯಾಪಾರಸ್ಥರು ಪಿಎಂ ಸ್ವನಿಧಿ ಯೋಜನೆಯೆಲ್ಲಿ ನೊಂದಾಯಿಸಿಕೊಂಡು ಫಲಾನುಭವಿಗಳಾದಲ್ಲಿ ಕೇಂದ್ರ ಸರ್ಕಾರದ ಇತರ ಯೋಜನೆಗಳಾದ ಪಿಎಂ ಸುರಕ್ಷಾ ಭಿಮಾ ಯೋಜನೆ, ಪಿಎಂ ಜೀವನ ಜ್ಯೋತಿ ವಿಮಾ ಯೋಜನೆ, ಪಿಎಂ ಜನಧನ್ ಯೋಜನೆ, ಪಿಎಂ ಜನನಿ ಸುರಕ್ಷಾ ಯೋಜನೆ, ಪಿಎಂ ಮಾತೃ ವಂದನ ಯೋಜನೆಗಳ ಲಾಭ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದ ವಿಷಯ ನಿರ್ವಾಹಕರಾಗಿ ಆಗಮಿಸಿದ ಪಪಂನ ಮೋಕ್ಷಮ್ಮ ಕೊಡ್ಲಿ ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯ ಅಡಿಯಲ್ಲಿ ಸಾಲ ಪಡೆಯುವ ಬಗೆ, ಸಾಲ ಮರು ಪಾವತಿಸುವ ವಿಧಾನ, ಸಾಲ ಪಡೆಯಲು ಬೇಕಾದ ಅಗತ್ಯ ದಾಖಲೆಗಳು, ಯೋಜನೆಯ ಕುರಿತು ಮಾಹಿತಿ ತಿಳಿಸಿದರು.

ಕುಷ್ಟಗಿಯ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘದ ಕಲಾವಿದರು ಜಾನಪದ ಸಂಗೀತ ಗಾಯನದ ಮೂಲಕ ಮತ್ತು ಬೀದಿ ನಾಟಕದ ಮೂಲಕ ಯೋಜನೆ ಬಗ್ಗೆ ವಿವರವಾಗಿ ತಿಳಿಸಿದರು. ಯೋಜನೆಯ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಪಟ್ಟಣದ ಇಟಗಿ ಮಸೀದಿ, ವಾರದ ಸಂತೆ ಮಾರುಕಟ್ಟೆ, ಬಸ್ ನಿಲ್ದಾಣದ ಸ್ಥಳಗಳಲ್ಲಿ ಹಮ್ಮಿಕೊಂಡು ಜನಜಾಗೃತಿ ಮೂಡಿಸಲಾಯಿತು.

ಪಟ್ಟಣದ ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕಲ್ಲಪ್ಪ, ಸರಸ್ವತಿ ಸಂಸ್ಕೃತಿಕ ಮಹಿಳಾ ಸಂಘದ ಅಧ್ಯಕ್ಷೆ ಲಲಿತಮ್ಮ ಹಿರೇಮಠ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಪ್ರಕಾಶ್ ಬಂಡಿ, ಶ್ರೀಕಾಂತ್ ಬಾರಿಗಿಡದ, ಸಿಬ್ಬಂದಿ ಇದ್ದರು. ಬಸವರಾಜ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

Share this article