ಬೆಂಗಳೂರು : ನಗರದಲ್ಲಿ ಸೋಮವಾರ ತಡರಾತ್ರಿಯಿಂದ ಬಹುತೇಕ 18 ಗಂಟೆಗಳ ಕಾಲ ಬಿಟ್ಟು ಬಿಡದೇ ಸುರಿದ ಜಡಿ ಮಳೆಗೆ ಉದ್ಯಾನ ನಗರಿ ನೆಂದು ಮುದ್ದೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಇಡೀ ನಗರವೇ ಜಲಾವೃತಗೊಂಡಿದೆಯೋ ಎಂಬ ಭಾವ ಮೂಡಲು ಕಾರಣವಾಯ್ತು. ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಸಂಚಾರ ವ್ಯತ್ಯಯಕ್ಕೆ ಕಾರಣವಾದರೆ, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲಿದ್ದ ವಾಹನಗಳು ಮುಳುಗಿ, ಜನ ರಸ್ತೆಗಿಳಿಯಲು ಸಂಕಟ ಪಟ್ಟು ವ್ಯಾಪರ ಕುಸಿಯಿತು. ಇಡೀ ದಿನ ಮೋಡ ಕವಿದ ವಾತಾವರಣ ಹಾಗೂ ಜಡಿ ಮಳೆಯು ಇಡೀ ನಗರವನ್ನು ಚಳಿಯಲ್ಲಿ ನಡುಗಿಸಿತು.
ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಕಾರಣ ಇನ್ನೂ 2-3 ದಿನ ಇದೇ ರೀತಿಯ ಜಡಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮಳೆ ಅಬ್ಬರ ಇದೇ ರೀತಿ ಮುಂದುವರೆದರೆ ನಿತ್ಯದ ಜೀವನ ಮತ್ತಷ್ಟು ಹೈರಾಣಾಗಲಿದೆ.
ವಿಪರೀತ ಮಳೆಯಿಂದಾಗಿ ನಗರದ ಹೃದಯಭಾಗ ಮೆಜೆಸ್ಟಿಕ್ ಸೇರಿದಂತೆ ಎಲ್ಲೆಡೆ ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತು. ಉತ್ತರದ ಭಾಗಗಳಾದ ವಿದ್ಯಾರಣ್ಯಪುರ, ಕೋರಮಂಗಲ, ಯಲಹಂಕ, ದೇವನಹಳ್ಳಿ, ಹೆಣ್ಣೂರು ಕ್ರಾಸ್, ಜಕ್ಕೂರು, ಥಣಿಸಂದ್ರಗಳಲ್ಲಿ ಮಳೆ ಹೆಚ್ಚಾಗಿ ಆರ್ಭಟಿಸಿತು. ದಕ್ಷಿಣ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ, ಕೆಂಗೇರಿ ಉಪನಗರ, ಉಲ್ಲಾಳ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಪ್ರದೇಶದಲ್ಲಿ ಆಗಾಗ ಜಡಿಮಳೆ ಬಂದರೆ. ಹಲವು ಸಮಯ ಜೋರಾದ ಮಳೆಯಾಯಿತು.
ಪರಪ್ಪನ ಅಗ್ರಹಾರ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಸಮಸ್ಯೆಗೀಡಾದರು. ಸಣ್ಣ ಮಳೆಗೆ ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಹೊಸ ರೋಡ್‌ನಿಂದ ಸರ್ಜಾಪುರ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿತ್ತು. ಬೆಳ್ಳಂದೂರು ಕೆರೆ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು. ದೊಡ್ಡದೊಡ್ಡ ಗುಂಡಿ, ಕೆಸರಿನ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡವು. ಸುತ್ತ 2 ಕಿ.ಮೀ. ಸಂಚಾರ ಸಾಧ್ಯವಾಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಲವು ವಾಹನಗಳು ಕೆಟ್ಟು ನಿಂತು ಸವಾರರು ಪೇಚಿಗೆ ಸಿಲುಕಿದರು.
ಜೋರು ಮಳೆಯ ಪರಿಣಾಮ ಕಾಮಗಾರಿ ನಡೆಯುತ್ತಿದ್ದ ಜಯಮಹಲ್ ರಸ್ತೆಯುದ್ದಕ್ಕೂ ರಾಡಿ, ಕೆಂಪುಮಣ್ಣಿನ ನೀರು ಹರಿಯಿತು. ವಾಹನಗಳು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಉತ್ತರ ಹಳ್ಳಿ ರೋಡ್, ಎಚ್‌ಎಂಟಿ ಲೇಔಟ್, ಸದಾಶಿವನಗರ, ಓಕಳೀಪುರಂ, ವಿಂಡ್ಸರ್ ಮ್ಯಾನರ್, ಗೊರಗುಂಟೆ ಪಾಳ್ಯಗಳಲ್ಲಿ ಮಳೆ ವಿಪರೀತವಾಗಿತ್ತು.
ಅಂಡರ್‌ಪಾಸ್‌ನಲ್ಲಿ ನೀರು : ಮುರುಗೇಶ್ ಪಾಳ್ಯ ಬೆಳ್ಳಂದೂರು ಮುಖ್ಯರಸ್ತೆ ನೀರು ನಿಂತು ಕಾರು, ಬೈಕ್ ಸೇರಿ ಸುಮಾರು 10ಕ್ಕೂ ಹೆಚ್ಚು ವಾಹನಗಳು ಕೆಟ್ಟು ನಿಂತಿದ್ದವು. ಕೊಡಗೆಹಳ್ಳಿ ಅಂಡರ್ ಪಾಸ್‌ನಲ್ಲಿ ಸುಮಾರು 5 ಅಡಿ ನೀರು ನಿಂತಿತ್ತು. ಇಲ್ಲಿ ಟಿಟಿ ವಾಹನವೊಂದು ಸಿಲುಕಿತು.
ಏರ್‌ಪೋರ್ಟ್ ರಸ್ತೆ ಜಾಮ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಪೋರ್ಟ್‌ನಿಂದ ಹೋಗಿ ಬರುವ ವಾಹನ ಸವಾರರಲ್ಲಿ ರೇಜಿಗೆ ಹುಟ್ಟಿಸಿತು. ಈ ಬಗ್ಗೆ ಹಲವರು ‘ಎಕ್ಸ್’ನಲ್ಲಿ ಬೇಸರ ತೋಡಿಕೊಂಡರು. ಹುಣಸಮಾರನಹಳ್ಳಿ ಬಳಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಗಂಟೆಗಟ್ಟಲೆ ವಾಹನಗಳು ನಿಂತಿದ್ದವು.
ಮಳಿಗೆಗಳಿಗೆ ನುಗ್ಗಿದ ನೀರು: ಕೆ.ಜಿ.ರಸ್ತೆ ಜಿಲ್ಲಾಧಿಕಾರಿ ಕ್ಯಾಂಟೀನ್‌ಗೆ ನೀರು ನುಗ್ಗಿತ್ತು. ಮೆಜೆಸ್ಟಿಕ್ ರಸ್ತೆಗಳಲ್ಲೇ ನೀರು ತುಂಬಿಕೊಂಡಿತು. ಗಾಂಧಿನಗರದ ಸುತ್ತಮುತ್ತಲೂ ರಸ್ತೆ ಕೆರೆಯಂತಾಗಿತ್ತು. ಇಲ್ಲಿರುವ ಹಲವು ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ಪರದಾಡಿದರು. ಅಂಗಡಿಗಳಿಗೂ ನುಗ್ಗಿ ವಸ್ತುಗಳು ಹಾನಿಗೀಡಾದವು. ಒಳಚರಂಡಿ ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಕ್ರಮ ವಹಿಸಲು ಹಲವು ಬಾರಿ ಬಿಬಿಎಂಪಿಗೆ ಕೋರಿದರೂ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಟರಿ ಟೌನ್ ಬಳಿಯ ಗಾಂಧಿ ಗ್ರಾಮದಿಂದ ಟ್ಯಾನಿರೋಡ್‌ಗೆ ಸಂಪರ್ಕಿಸುವ ರಸ್ತೆ ಮುಳುಗಿತ್ತು. ಇಲ್ಲಿ ಕೂಡ ಹಲವು ಮನೆ ಅಂಗಡಿಗಳಿಗೆ ನುಗ್ಗಿದ ನೀರು ನುಗ್ಗಿತು. ಮೆಟ್ರೋ ಕಾಮಗಾರಿ ಹಾಗೂ ಮೋರಿಯಲ್ಲಿ ನೀರು ನಿಂತಿದ್ದರಿಂದ ಇಲ್ಲಿ ಓಡಾಟ ಅಸಾಧ್ಯವಾಗಿತ್ತು.
ಧರೆಗುರುಳಿದ ಮರ : ಎಚ್‌ಎಂಟಿ ಲೇಔಟ್, ಗೋವಿಂದ ರಾಜ್ ನಗರ, ವಿಜಯ ನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಬೃಹತ್ ಮರಗಳು ಧರೆಗುರುಳಿದವು. ಸಾಕಷ್ಟು ಕಡೆಗಳಲ್ಲಿ ರೆಂಬೆಕೊಂಬೆಗಳು ರಸ್ತೆಗೆ ಬಿದ್ದವು. ಪರಿಣಾಮ ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿತ್ತು. ಬಿಬಿಎಂಪಿ ವಲಯವಾರು 39 ಕಡೆಗಳಲ್ಲಿ ಮರಗಳು ಬಿದ್ದ ದೂರು ದಾಖಲಾಗಿದ್ದು, 26 ಕಡೆಗಳಲ್ಲಿ ತೆರವು ಮಾಡಲಾಯಿತು. ಅದೇ ರೀತಿ ಸುಮಾರು 55 ಕಡೆ ರೆಂಬೆಕೊಂಬೆಗಳು ಬಿದ್ದ ಬಗ್ಗೆ ದೂರುಗಳು ಬಂದಿದ್ದು ಸಂಜೆವರೆಗೆ 29 ಕಡೆ ತೆರವು ಮಾಡಿ ಸಮಸ್ಯೆ ನಿವಾರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿಗೆ ನಗರದ ಸುಮಾರು 140ಕ್ಕೂ ಹೆಚ್ಚು ಕಡೆ ಮಳೆ ನೀರು ನುಗ್ಗಿರುವ ಬಗ್ಗೆ ದೂರು ದಾಖಲಾಯಿತು. ಪಂಪ್‌ಸೆಟ್ ಮೂಲಕ ನೀರು ತೆರವು ಮಾಡುವ ಕಾರ್ಯಾಚರಣೆ ನಡೆಸಲಾಯಿತಾದರೂ ಕೆಲವೆಡೆ ಮಳೆಯಿಂದ ಸಾಧ್ಯವಾಗಲಿಲ್ಲ.