2 ದಿನ ಕರಾವಳಿಗೆ ರೆಡ್‌ ಅಲರ್ಟ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

ಸಾರಾಂಶ

ಮುಂದಿನ 48 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗೆ ರೆಡ್‌ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ

ಬೆಂಗಳೂರು : ಮುಂದಿನ 48 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗೆ ರೆಡ್‌ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮುಂದಿನ ಎರಡು ದಿನ ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 20 ಸೆಂ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ರೆಡ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ 15ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಲಕ್ಷಣ ಇರುವುದರಿಂದ ಆರೆಂಜ್‌ ಅಲರ್ಟ್‌ನ ಘೋಷಣೆ ಮಾಡಲಾಗಿದೆ.

ಜುಲೈ 8ರಿಂದ 10ರ ವರೆಗೆ ಮೂರು ದಿನ ಮಲೆನಾಡು ಮತ್ತು ಕರಾವಳಿಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಸೂಚನೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಜುಲೈ 8ರಿಂದ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜುಲೈ 9ರಿಂದ ಮಳೆ ಪ್ರಮಾಣ ಇನ್ನಷ್ಟು ತೀವ್ರಗೊಳ್ಳಲಿದೆ. ಒಟ್ಟಾರೆ ಜುಲೈ 12 ವರೆಗೆ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿ ಪ್ರಕಾರ, ಉತ್ತರ ಕನ್ನಡದ ಮಂಕಿಯಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾದ ವರದಿಯಾಗಿದೆ. ಅಂಕೋಲಾ, ಕಾರವಾರದಲ್ಲಿ ತಲಾ 11, ಗೋಕರ್ಣ 9, ಶಿರಾಲಿ, ಕುಮಟಾದಲ್ಲಿ ತಲಾ 8, ಕದ್ರಾದಲ್ಲಿ 7, ಹೊನ್ನಾವರದಲ್ಲಿ 6, ಜಗಲಬೆಟ್‌, ಗೇರುಸೊಪ್ಪ, ಕೋಟ ಹಾಗೂ ಲೋಂಡಾದಲ್ಲಿ ತಲಾ 5, ಯಲ್ಲಾಪುರ, ಉಡುಪಿ, ಆಗುಂಬೆ, ಲಿಂಗನಮಕ್ಕಿಯಲ್ಲಿ ತಲಾ 4, ಕುಂದಾಪುರ, ಕಾರ್ಕಳ, ಮಾಣಿಯಲ್ಲಿ ತಲಾ 3, ಮಂಗಳೂರು, ಸಿದ್ದಾಪುರ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.

Share this article