ಎನ್‌ಡಿಎ ಒಕ್ಕೂಟದ ಬಿಜೆಪಿ ಹಾಗೂ ಜೆಡಿಎಸ್‌ನ 30ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರ್ಕಾರ ಬೀಳಿಸಲು 50ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು. ಬದಲಿಗೆ ಎನ್‌ಡಿಎ ಒಕ್ಕೂಟದ ಬಿಜೆಪಿ ಹಾಗೂ ಜೆಡಿಎಸ್‌ನ 30ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಬುಧವಾರ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಟ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಅವರು ಇಲ್ಲಿಗೆ ಬಂದರೂ ಏನೂ ಮಾಡಲಾಗುವುದಿಲ್ಲ. ಬರೆದಿಟ್ಟುಕೊಳ್ಳಿ ಚುನಾವಣೆ ಮುಗಿದ ತಿಂಗಳ ಒಳಗಾಗಿ ಅವರೇ ಮಾಜಿಯಾಗಲಿದ್ದಾರೆ. ಅವರ ಸರ್ಕಾರವೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ನ 11-12 ಮಂದಿ ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ನೀವೇ ಹೇಳುತ್ತಿದ್ದೀರಿ. ಹೀಗಿದ್ದಾಗ ಇಷ್ಟು ಬಹುಮತದ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಿಂದೆ ಹೋದವರು ಶೀಘ್ರದಲ್ಲೇ ಮತ್ತೆ ಮಾತೃ ಪಕ್ಷಕ್ಕೆ ವಾಪಸು ಆಗುತ್ತಾರೆ. ಎಲ್ಲರೂ ಶಿವಸೈನಿಕರು, ನಾಯಕರು ಉದ್ಧವ್ ಠಾಕ್ರೆ ಬಳಿ ಹೋಗುತ್ತಾರೆ. ಅಷ್ಟೇ ಅಲ್ಲದೆ ಎನ್‌ಸಿಪಿ ಕಡೆಯೂ ವಾಪಸಾಗುತ್ತಾರೆ. ಅಲ್ಲಿ ಇಂಡಿಯಾ ಒಕ್ಕೂಟ 30-35 ಸ್ಥಾನ ಗೆಲಲ್ಲಿದ್ದು, ಬಳಿಕ 30-40 ಮಂದಿ ಶಾಸಕರು ವಾಪಸಾಗಲಿದ್ದಾರೆ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಮಹಾಘಟಬಂಧನ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮುಖ್ಯಮಂತ್ರಿಗಳ ಭೇಟಿ ಬಗ್ಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಭೇಟಿಯಾಗಿರಲಿಲ್ಲ. ಜತೆಗೆ ಇಲಾಖೆಯಲ್ಲಿನ ವಿಚಾರಗಳನ್ನು ಚರ್ಚಿಸಲಾಯಿತು. ಅದನ್ನು ಬಿಟ್ಟು ಬೇರೇನೂ ಚರ್ಚೆ ಮಾಡಿಲ್ಲ ಎಂದರು.