ವೈದ್ಯರ ಮನೆಗೆ ಬೆಂಕಿ ಹಚ್ಚಲು ಸುಪಾರಿ!

ಕೆಲ ದಿನಗಳ ಹಿಂದೆ ವೈದ್ಯ ಡಾ. ಬಿ.ಎಸ್‌.ಗಂಗಾಧರ್ ಅವರ ಮನೆಗೆ ಬೆಂಕಿ ಹಚ್ಚಿ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ನಾಲ್ವರು ಕಿಡಿಗೇಡಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Follow Us

  ಬೆಂಗಳೂರು : ಕೆಲ ದಿನಗಳ ಹಿಂದೆ ವೈದ್ಯ ಡಾ. ಬಿ.ಎಸ್‌.ಗಂಗಾಧರ್ ಅವರ ಮನೆಗೆ ಬೆಂಕಿ ಹಚ್ಚಿ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ನಾಲ್ವರು ಕಿಡಿಗೇಡಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾರ್ವೆಬಾವಿಪಾಳ್ಯದ ಜೀವನ್‌, ರಾಕೇಶ್‌, ಸಚಿನ್ ಹಾಗೂ ಪ್ರಜ್ವಲ್ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೇ 11ರಂದು ಬಾಪೂಜಿ ಲೇಔಟ್‌ನಲ್ಲಿ ನೆಲೆಸಿರುವ ವೈದ್ಯ ಗಂಗಾಧರ್ ಅವರ ಮನೆಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕೃತ್ಯದ ತನಿಖೆಗಿಳಿದ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆದರಿಸಲು ಬೆಂಕಿ ಹಾಕಿದ್ರು..

ವೈದ್ಯ ಗಂಗಾಧರ್ ಅವರು ರಾಜಕೀಯದಲ್ಲಿ ಸಹ ಸಕ್ರಿಯವಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಆಪ್ತರಾಗಿದ್ದಾರೆ. ವೈಯಕ್ತಿಕ ವಿಚಾರವಾಗಿ ತಮ್ಮ ಸ್ನೇಹಿತನ ಜತೆ ಅವರಿಗೆ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ವಿಷಯವಾಗಿ ವೈದ್ಯರಿಗೆ ಬೆದರಿಸುವ ಸಲುವಾಗಿ ಮನೆಗೆ ಬೆಂಕಿ ಹಚ್ಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಪೂಜಿ ಲೇಔಟ್‌ನ 4ನೇ ಅಡ್ಡರಸ್ತೆಯಲ್ಲಿ ಎಂಟು ವರ್ಷಗಳಿಂದ ತಮ್ಮ ಕುಟುಂಬ ಜತೆ ಗಂಗಾಧರ್ ನೆಲೆಸಿದ್ದು, ಅವರ ಮನೆಗೆ ತ್ಯಾಗರಾಜನ್ ಎಂಬುವರು ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಮೇ 11ರಂದು ತಡರಾತ್ರಿ 12.30ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು, ವೈದ್ಯರ ಮನೆ ಹೊರಾವರಣದಲ್ಲಿ ನಿಲ್ಲಿಸಿದ್ದ ಕಾರು, ಬೈಕ್‌ ಹಾಗೂ ಗೇಟು ಮೇಲೆ ಪೆಟ್ರೋಲ್ ಸುರಿದು ಏಕಾಏಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ವೇಳೆ ಬೆಂಕಿ ನಂದಿಸಲು ಮುಂದಾದ ಕಾವಲುಗಾರನ ಕೈಗಳಿಗೆ ಸುಟ್ಟ ಗಾಯಗಳಾಗಿದ್ದವು. ಈ ಕೃತ್ಯಕ್ಕೆ ಆರೋಪಿಗಳಿಗೆ ವ್ಯಕ್ತಿಯೊಬ್ಬ ಸುಪಾರಿ ಕೊಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಾಥಮಿಕ ಹಂತದ ಖರ್ಚುವೆಚ್ಚಗಳಿಗೆ ಬಂಧಿತರಿಗೆ 50 ಸಾವಿರ ಸಂದಾಯವಾಗಿತ್ತು ಎಂದು ಮೂಲಗಳು ಹೇಳಿವೆ.

Read more Articles on