ಬೆಂಗಳೂರು ನಗರದಲ್ಲಿ ಮಕ್ಕಳಿಂದಲೇ 53 ಸಾವಿರ ಸಸಿಗಳ ಪೋಷಣೆ

Published : Jun 07, 2025, 11:14 AM IST
Mahogany tree

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ 53 ಸಾವಿರ ಸಸಿಗಳನ್ನು ಮಕ್ಕಳೇ ನೆಟ್ಟು ಬೆಳೆಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ 53 ಸಾವಿರ ಸಸಿಗಳನ್ನು ಮಕ್ಕಳೇ ನೆಟ್ಟು ಬೆಳೆಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಬಿಎಂಪಿಯು ಜವಹರಲಾಲ್ ನೆಹರು ತಾರಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಪರಿಸರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಶಾಲೆ ಒಂದೊಂದು ಪ್ರದೇಶ ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಶಾಲೆ ವಿದ್ಯಾರ್ಥಿಗಳಿಂದ ಗಿಡ ನೆಡಿಸಿ ಅದನ್ನು ಬೆಳೆಸಬೇಕು. ಆ ಗಿಡದ ಮೇಲೆ ಆ ಮಗುವಿನ ಹೆಸರು ಹಾಕಿಕೊಳ್ಳುವ ಅವಕಾಶ ನೀಡುವ ಕಾರ್ಯ ಆರಂಭಿಸಿದ್ದೇವೆ. ಈ ಕಾರ್ಯಕ್ರಮದಡಿ 53 ಸಾವಿರ ಮಕ್ಕಳು ಗಿಡ ನೆಟ್ಟು ಅವುಗಳನ್ನು ಬೆಳೆಸುತ್ತಿದ್ದಾರೆ. ಈ ಕಾರ್ಯಕ್ರಮ ಇದೇ ರೀತಿ ಮುಂದುವರಿಯಲಿದೆ ಎಂದು ಹೇಳಿದರು.

ಬೆಂಗಳೂರು ಹವಾಮಾನ ಕ್ರಿಯಾ ಕೋಶ (ಬೆಂಗಳೂರು ಕಾರ್ಯಯೋಜನೆ ಕ್ಲಬ್) ಆರಂಭಿಸಿದ್ದೇವೆ. ಈ ಕ್ಲಬ್ ನಲ್ಲಿ ಕನಿಷ್ಠ 10 ಜನ ಸದಸ್ಯರು ಇರಬೇಕು ಎಂದು ಪ್ರಸ್ತಾವನೆ ಬಂದಿತ್ತು. ಅದನ್ನು ಕನಿಷ್ಠ 25 ಸದಸ್ಯರು ಇರಬೇಕು ಎಂದು ತೀರ್ಮಾನ ಮಾಡಿದ್ದೇನೆ. ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಶಾಲೆಗಳಿವೆ. ಇಲ್ಲಿ ಆರಂಭಿಸಿದ ನಂತರ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಬಹುದು. ಬೆಂಗಳೂರು ಗಾರ್ಡನ್ ಸಿಟಿ ಎಂಬ ಹೆಸರು ಪಡೆದಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ನೀಡಬೇಕು ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಇದೀಗ ಬ್ಲೂ ಗ್ರೀನ್ ಪ್ರಶಸ್ತಿ ನೀಡಿದ್ದೇವೆ. ಮುಂದೆ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಹೆಚ್ಚು ಸ್ಪರ್ಧೆ ಏರ್ಪಡಲಿದೆ. ವಿವಿಧ ನಾಗರಿಕ ಸಂಘ- ಸಂಸ್ಥೆಗಳು ಕೂಡ ಈ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 175 ಅರ್ಜಿಗಳು ಬಂದಿವೆ. ಮುಂದೆ 500-1000 ಅರ್ಜಿ ಬರಬಹುದು. ಶಾಲೆಗಳಲ್ಲಿನ ಕ್ಲಬ್ ಗಳಿಗೆ ಅಗತ್ಯ ನೆರವು ನೀಡಲಾಗುವುದು. ಈ ಕ್ಲಬ್ ಗಳ ಕಾರ್ಯಾಚರಣೆ ಕುರಿತ ಮಾರ್ಗಸೂಚಿ ಪುಸ್ತಕವನ್ನು ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಅನ್ ಬಾಕ್ಸಿಂಗ್ ಬೆಂಗಳೂರ್ ನ ಪ್ರಶಾಂತ್ ಪ್ರಕಾಶ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಡಾ. ಕೆ ಹರೀಶ್ ಕುಮಾರ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಬಿಎಂಟಿಸಿ ವ್ಯವಸ್ಥಾಕ ನಿರ್ದೇಶಕ ಆರ್. ರಾಮಚಂದ್ರನ್, ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಚೋಳನ್, ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮೊದಲಾದವರಿದ್ದರು.

ಪ್ರತಿಜ್ಞಾ ವಿಧಿ ಬೋಧನೆ

ಹವಾಮಾನ ಜಾಗೃತಿ ಮೂಡಿಸಿ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಕ್ರಿಯಾತ್ಮಕ ಯೋಜನೆಗಳನ್ನು ರೂಪಿಸುವ ಸಲುವಾಗಿ ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಯುವ ನೇತೃತ್ವದ ಹವಾಮಾನ ಕ್ರಿಯಾ ಕ್ಲಬ್‌ಗಳನ್ನು ಪ್ರಾರಂಭಿಸಲಾಗಿದೆ. ಒಟ್ಟು 706 ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು, ಹವಾಮಾನ ಕ್ರಿಯಾ ಕ್ಲಬ್‌ಗಳ ವಿದ್ಯಾರ್ಥಿಗಳಿಗೆ ಪರಿಸರ-ಪ್ರಜ್ಞೆಯ ಅಭ್ಯಾಸಗಳಿಗೆ ಬದ್ಧರಾಗಲು ಹವಾಮಾನ ಪ್ರತಿಜ್ಞಾ ವಿಧಿಯನ್ನು ಉಪ ಮುಖ್ಯಮಂತ್ರಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಬ್ಲೂ-ಗ್ರೀನ್ ಪ್ರಶಸ್ತಿ ವಿತರಣೆ

ಬ್ಲೂ ಗ್ರೀನ್‌ ಪ್ರಶಸ್ತಿಗೆ ಒಟ್ಟು 175ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 15 ವಿಭಾಗದಡಿ ಇಂಧನ ಮತ್ತು ಸಾರಿಗೆ ವಿಭಾಗದಲ್ಲಿ ಬಿಎಂಟಿಸಿ, ಘನತ್ಯಾಜ್ಯ ವಿಭಾಗದಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ, ಇಂಧನ ಮತ್ತು ಕಟ್ಟಡಗಳು, ನೀರು, ತ್ಯಾಜ್ಯನೀರು ಮತ್ತು ಮಳೆನೀರು ವಿಭಾಗದಡಿ ಕ್ಲಾಸಿಕ್ ಆರ್ಚರ್ಡ್ಸ್ ಪ್ರಾಪರ್ಟಿ ಮಾಲೀಕರ ಸಂಘ (ಅಪಾರ್ಟ್ಮೆಂಟ್ ಮಾಲೀಕರ ಸಂಘ), ನೀರು, ತ್ಯಾಜ್ಯ ನೀರು ಮತ್ತು ಮಳೆನೀರು ವಿಭಾಗದಡಿ ಸೆಂಚುರಿ ಸಾರಸ್ ಅಪಾರ್ಟ್ಮೆಂಟ್ ಮಾಲೀಕರ ಸಂಘ(ಅಪಾರ್ಟ್ಮೆಂಟ್ ಸಂಘ), ನೀರು, ತ್ಯಾಜ್ಯ ನೀರು ಮತ್ತು ಬಿರುಗಾಳಿ ನೀರು, ವಿಪತ್ತು ನಿರ್ವಹಣೆ ವಿಭಾಗದಡಿ ಹಸಿರು ದಳ ಹೀಗೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಸದ ಸಮಸ್ಯೆ ದೂರಿಗೆ ವಾಟ್ಸಾಪ್ ಸಂಖ್ಯೆ ಬಿಡುಗಡೆ

ನಗರದ ಸ್ವಚ್ಛತೆಯ ದೃಷ್ಟಿಯಿಂದ ಪ್ರತ್ಯೇಕ ದೂರು ಕೇಂದ್ರ ಸ್ಥಾಪಿಸಿದ್ದು, 9448197197 ವ್ಯಾಟ್ಸಪ್ ಸಂಖ್ಯೆಗೆ ಕಸ ಸಮಸ್ಯೆಯ ಫೋಟೋ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಸ ವಿಲೇವಾರಿ ಮಾಡಿ ಸಮಸ್ಯೆ ಪರಿಹಾರ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ