ಬೆಂಗಳೂರು ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಅನುಮತಿ ನೀಡಲು 75 ಏಕಗವಾಕ್ಷಿ ಕೇಂದ್ರ

Published : Aug 03, 2025, 07:29 AM IST
Vastu tips for Ganesha idol placement

ಸಾರಾಂಶ

ನಗರದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಬಿಎಂಪಿಯ 75 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಪದ್ಧತಿಯಲ್ಲಿ ಒಂದೇ ಸೂರಿನಡಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು

ಬೆಂಗಳೂರು : ನಗರದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಬಿಎಂಪಿಯ 75 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಪದ್ಧತಿಯಲ್ಲಿ ಒಂದೇ ಸೂರಿನಡಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ 75 ಏಕಗವಾಕ್ಷಿ ಕೇಂದ್ರ ತೆರೆದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಏಕಗವಾಕ್ಷಿ ಕೇಂದ್ರ ವಿಳಾಸ, ನೋಡಲ್ ಅಧಿಕಾರಿಗಳ ವಿವರವಾದ ಮಾಹಿತಿಯನ್ನು ಶೀಘ್ರದಲ್ಲಿ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿ ವರ್ಷದಂತೆ ಗಣೇಶ ವಿಸರ್ಜನೆಗೆ ಪ್ರಮುಖ ಕೆರೆ ಮತ್ತು ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್) ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಾರ್ವಜನಿಕರು ವಾಯುಮಾಲಿನ್ಯ, ನೀರು ಕಲುಷಿತ ಆಗುವಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾನೆ ಮಾಡಬಾರದು, ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ವೇಳೆ ಶಾಂತಿ ಕಾಪಾಡಬೇಕು. ನಾಗರಿಕರು ಹಬ್ಬಗಳ ಆಚರಣೆಯ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿದ್ದು, ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಗಣೇಶ ಮೆರವಣಿಗೆಯ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೆಲ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಅಂತಹ ರಸ್ತೆಗಳಲ್ಲಿ ಸಮಸ್ಯೆ ಇದ್ದರೆ, ವಿಶೇಷವಾಗಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದೆಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ ಮಾತನಾಡಿ, ಹಬ್ಬಗಳನ್ನು ಆಚರಿಸುವ ವೇಳೆ ಬಿಬಿಎಂಪಿ, ಪೊಲೀಸ್ ಇಲಾಖೆಯ ಸಲಹೆ, ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಮೆರವಣಿಗೆ, ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕು. ಎಲ್ಲಿಯೂ ಸಂಚಾರ ದಟ್ಟಣೆಯಾಗದಂತೆ ಸಂಚಾರಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಬಿಬಿಎಂಪಿ, ಬೆಸ್ಕಾಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಗಣೇಶ ಪ್ರತಿಷ್ಠಾನದ ಆಯೋಜಕರು, ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ