ರಾಜ್ಯದಲ್ಲಿ ಶೇ.80ರಷ್ಟು ಕೈಮಗ್ಗಗಳು ಕಣ್ಮರೆ - ಮೈಸೂರು ವಿವಿ ಸಿಎಸ್‌ಎಸ್‌ಐ ಕೇಂದ್ರದಿಂದ ಅಧ್ಯಯನ ವರದಿ ತಯಾರಿ

Published : Jan 31, 2025, 09:48 AM IST
Handloom

ಸಾರಾಂಶ

ದೇವಾಂಗ ಸಮುದಾಯದ ಶೇ.80 ಹೆಚ್ಚಿನ ಜನರು ಇಂದಿಗೂ ನೇಕಾರಿಕೆಯನ್ನೇ ಅವಲಂಬಿಸಿದ್ದಾರೆ. ಕೊರೋನಾ ಬಳಿಕ ಇವರ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದ್ದು, ಶೇ.80ರಷ್ಟು ಕೈಮಗ್ಗಗಳು ಕಣ್ಮರೆ-ಅಳಿವಿನಂಚಿನಲ್ಲಿವೆ ಎಂದು ಅಧ್ಯಯನಾವರದಿಯೊಂದು ತಿಳಿಸಿದೆ.

ಬಿ. ಶೇಖರ್ ಗೋಪಿನಾಥಂ

  ಮೈಸೂರು : ದೇವಾಂಗ ಸಮುದಾಯದ ಶೇ.80 ಹೆಚ್ಚಿನ ಜನರು ಇಂದಿಗೂ ನೇಕಾರಿಕೆಯನ್ನೇ ಅವಲಂಬಿಸಿದ್ದಾರೆ. ಕೊರೋನಾ ಬಳಿಕ ಇವರ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದ್ದು, ಶೇ.80ರಷ್ಟು ಕೈಮಗ್ಗಗಳು ಕಣ್ಮರೆ-ಅಳಿವಿನಂಚಿನಲ್ಲಿವೆ ಎಂದು ಅಧ್ಯಯನಾವರದಿಯೊಂದು ತಿಳಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ (ಸಿಎಸ್ಎಸ್ಐ) ನಡೆಸಿದ ದೇವರಾಜು ಅರಸು ಸಂಶೋಧನಾ ಸಂಸ್ಥೆ ಪ್ರಾಯೋಜಿತ ದೇವಾಂಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಕರಡು ವರದಿ ಮುಕ್ತಾಯವಾಗಿದ್ದು, ನೇಕಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ದೇವಾಂಗ ಸಮುದಾಯದ ಕುರಿತು ಹೊಸ ಬೆಳಕು ಚೆಲ್ಲಿದೆ.

ಗುಣಾತ್ಮಕ ಜವಳಿಗಳಿಗೆ ಕಡ್ಡಾಯ ಬೆಂಬಲ ಬೆಲೆಯನ್ನು ಜಾರಿಗೊಳಿಸುವುದು ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತಾಗಲು ಮತ್ತು ಮಾರುಕಟ್ಟೆ ಶೋಷಣೆಯಿಂದ ರಕ್ಷಿಸಲು ನಿರ್ಧಿಷ್ಟ ಕಾರ್ಯ ವಿಧಾನಗಳನ್ನು (ಎಸ್ಓಪಿ) ಸ್ಥಾಪನೆ ಒಳಗೊಂಡ ಹೊಸ ಜವಳಿ ನೀತಿ- 2025 ರೂಪಿಸುವಂತೆ ವರದಿಯಲ್ಲಿ ಬಲವಾಗಿ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಗುಜರಾತ್ ಮತ್ತು ತಮಿಳುನಾಡು ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಸಿಎಸ್‌ಎಸ್‌ಐ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ. ನಂಜುಂಡ ಅವರ ತಂಡವು ಈ ಅಧ್ಯಯನ ನಡೆಸಿದ್ದು, ಇದಕ್ಕೆ ಡಿ. ದೇವರಾಜು ಅರಸು ಸಂಶೋಧನಾ ಸಂಸ್ಥೆ ₹6.25 ಲಕ್ಷ ಅನುದಾನ ನೀಡಿತ್ತು. ಕರಡು ವರದಿಯನ್ನು ಈಗಾಗಲೇ ಸಂಸ್ಥೆಗೆ ಸಲ್ಲಿಸಲಾಗಿದೆ. ಅಂತಿಮ ವರದಿ ಮುದ್ರಣದಲ್ಲಿದೆ.

ದೇವಾಂಗ ಸಮುದಾಯದ ಶೇ.80 ಹೆಚ್ಚಿನ ಜನರು ಇಂದಿಗೂ ನೇಕಾರಿಕೆಯನ್ನೇ ಅವಲಂಭಿಸಿದ್ದಾರೆ. ಕೊರೋನಾ ಬಳಿಕ ಇವರ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಗ್ರಾಮೀಣ ದೇವಾಂಗ ನೇಕಾರರು ಗುಳೇ ಹೊರಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿ ಸಹ ಹಿಡಿದಿದ್ದಾರೆ. ಪವರ್ ಲೂಮ್ಸ್ ಮತ್ತು ಹ್ಯಾಂಡ್ ಲೂಮ್ಸ್ ನಡುವಿನ ಸಂಘರ್ಷ, ಸಹಕಾರ ಸಂಘಗಳ ವೈಫಲ್ಯಗಳು, ಯುವಕರಲ್ಲಿ ಆಸಕ್ತಿಯ ಕೊರತೆ, ಉದ್ಯೋಗ ಬದಲಾವಣೆ, ಹೊಸ ವಿನ್ಯಾಸಗಳ ಜಾರಿಯಲ್ಲಿ ನಿಧಾನತೆ, ಮಜೂರಿ ಸಮಸ್ಯೆ, ಜವಳಿಯಲ್ಲಿ ಆಧುನಿಕ ತಂತ್ರಜ್ಞಾನದ ಕೊರತೆ, ಮಾರುಕಟ್ಟೆಯ ಸಮಸ್ಯೆ, ಮಧ್ಯವರ್ತಿಗಳ ಹಾವಳಿ, ಜಾಹೀರಾತು ಮತ್ತು ಪ್ರಚಾರದ ಕೊರತೆ, ಗಾರ್ಮೆಂಟ್ ಕ್ಷೇತ್ರದಿಂದ ಸ್ಪರ್ಧೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಡಿಜಿಟಲ್ ತಂತ್ರಜ್ಞಾನದಲ್ಲಿ ಹಿಂದುಳಿದಿರುವುದು ಇಂತಹ ಹಲವಾರು ಸಮಸ್ಯೆಗಳನ್ನು ನೇಕಾರರು ಅನುಭವಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ದೇವಾಂಗ ನೇಕಾರರು ಅಸಂಘಟಿತ ವಲಯದಲ್ಲಿ ಇದ್ದಾರೆ. ಈ ಅಧ್ಯಯನ ತಂಡದಲ್ಲಿ ಡಾ. ಮಹದೇವಯ್ಯ ಮತ್ತು ಡಾ. ಮಹಮ್ಮದ್ ಮುಸ್ತಾಫ ಇದ್ದರು.

ವಿಂಕಾರ, ಜುಲಹಾ ಸಮುದಾಯಗಳು ರಾಜ್ಯದಲ್ಲಿ ಇಲ್ಲ?

ದೇವಾಂಗ ಸಮುದಾಯದ ಉಪ ಜಾತಿಗಳಾದ ವಿಂಕಾರ ಮತ್ತು ಜುಲಹಾ ಸಮುದಾಯಗಳು ಕರ್ನಾಟಕ ರಾಜ್ಯದಲ್ಲಿ ಇಲ್ಲದಿರುವ ಬಗ್ಗೆ ವರದಿಯಲ್ಲಿ ನಮೂದಿಸಲಾಗಿದೆ. ವಿಂಕಾರ ಎಂದರೆ ಮರಾಠಿಯಲ್ಲಿ ನೇಕಾರ ಎಂದರ್ಥ. ಇವರು ಮಹಾರಾಷ್ಟ್ರದಲ್ಲಿ ಮಾತ್ರ ಕಂಡು ಬರುತ್ತಾರೆ. ಹಿಂದು ಜುಲಾಹ ಸಮುದಾಯದವರು ರಾಜ್ಯದಲ್ಲಿ ಎಲ್ಲಿಯೂ ಕಂಡು ಬರದಿರುವುದರಿಂದ ಜಾತಿ ಪಟ್ಟಿಯಿಂದ ಈ 2 ಸಮುದಾಯಗಳನ್ನು ಕೈ ಬಿಡುವುದರ ಕುರಿತ ವರದಿಯಲ್ಲಿ ಚರ್ಚಿಸಲಾಗಿದೆ.

ವರದಿಯ ಪ್ರಮುಖ ಶಿಫಾರಸುಗಳು

ನೇಕಾರ ಅಭಿವೃದ್ದಿ ನಿಗಮಕ್ಕೆ ಕನಿಷ್ಟ ₹1000 ಕೋಟಿ ಅನುದಾನ ಅಗತ್ಯ

ಡೈಯಿಂಗ್, ಪ್ರಿಂಟಿಂಗ್‌ ನಂತಹ ಕಚ್ಚಾ ಪದಾರ್ಥಗಳು ಸುಲಭವಾಗಿ ಸಿಗಬೇಕು

ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾದ ಅಳವಡಿಕೆ ಆಗಬೇಕು

ನೇಕಾರರಿಗೆ ನಿರಂತರ ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆ

ಸರ್ಕಾರಿ ಕಚೇರಿಗಳಿಗೆ ನೇಕಾರ ಅಭಿವೃದ್ಧಿ ನಿಗಮದಿಂದ ಬಟ್ಟೆ ಖರೀದಿ

ರಾಜ್ಯದಲ್ಲೂ ಕಪಡ ಮಾರ್ಕೆಟ್ ವ್ಯವಸ್ಥೆ ಜಾರಿ

ಕಾರ್ಯುಕ್ರಮಗಳ ನಿರಂತರ ಮೇಲ್ವಿಚಾರಣೆ, ಮೌಲ್ಯಮಾಪನ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ