ವೋಟರ್‌ ಲಿಸ್ಟ್‌ನಿಂದ 84 ಲಕ್ಷ ಮತದಾರರ ಹೆಸರಿಗೆ ಗೇಟ್‌ಪಾಸ್‌?

Published : Jul 30, 2026, 06:51 AM IST
Karnataka Voter List

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಸುಮಾರು 84 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. 84.31 ಲಕ್ಷ ಮತದಾರರ ಗಣತಿ ನಮೂನೆಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಸುಮಾರು 84 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ.

ಎಸ್ಐಆರ್ ವೇಳೆ ಗೈರು, ಸ್ಥಳಾಂತರ, ಮರಣ, ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ (ಎಎಸ್‌ಡಿಡಿಒ) ಸೇರಿದಂತೆ ವಿವಿಧ ಕಾರಣಕ್ಕಾಗಿ 84.31 ಲಕ್ಷ ಮತದಾರರ ಗಣತಿ ನಮೂನೆಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಎಎಸ್‌ಡಿಡಿಒ ವರ್ಗೀಕರಣಕ್ಕೆ ಸೇರಿದವರು ಬಿಎಲ್‌ಒಗಳನ್ನು ಭೇಟಿ ಮಾಡಿ ದಾಖಲಾತಿ ನೀಡಿ ನಮೂನೆ ಪಡೆದುಕೊಂಡು ಆ.8 ರೊಳಗೆ ಅರ್ಜಿ ಭರ್ತಿ ಮಾಡಿ ನೀಡಬಹುದು. ಅಲ್ಲದೇ 2002ರ ಎಸ್ಐಆರ್ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಮಾಡಿ ಬಿಎಲ್‌ಓಗಳಿಗೆ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಆರ್‌ ಭಾಗವಾಗಿ ರಾಜ್ಯದಾದ್ಯಂತ ಈವರೆಗೆ 84.31 ಲಕ್ಷ ಮಂದಿಯನ್ನು ಪತ್ತೆಯಾಗದ/ಸ್ಥಳಾಂತರ/ಮೃತ/ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ (ಎಎಸ್‌ಡಿಡಿಒ) ಎಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣದಲ್ಲಿ ಏನಾದರೂ ತಪ್ಪಾಗಿದ್ದರೆ, ಮತದಾರರು ತಮ್ಮ ಗಣತಿ ನಮೂನೆಗಳನ್ನು ಪಡೆದುಕೊಂಡು ಬಿಎಲ್‌ಒಗೆ ಸಲ್ಲಿಸಬಹುದು. ಅಂತಹ ಗಣತಿ ನಮೂನೆಗಳನ್ನು ರೋಲ್‌ ಬ್ಯಾಕ್‌ ಮಾಡಿ (ಎಎಸ್‌ಡಿಡಿಒ ವರ್ಗೀಕರಣದಿಂದ ತೆಗೆದುಹಾಕುವುದು) ಮತದಾರರಿಗೆ ಮತದಾರರ ನೋಂದಣಾಧಿಕಾರಿ (ಇಆರ್‌ಒ) ವಿತರಿಸಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ 14.99 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 51.74 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡರೆ, 5.62 ಲಕ್ಷ ಮತದಾರರು ಈಗಾಗಲೇ ಬೇರೆ ಕಡೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಸ್ಐಆರ್ ವೇಳೆ 11.61 ಲಕ್ಷ ನಾಗರಿಕರು ಗೈರಾದರೆ, ಸಹಿ ನಿರಾಕರಣೆ ಸೇರಿದಂತೆ ವಿವಿಧ ಕಾರಣಕ್ಕಾಗಿ 33 ಸಾವಿರ ಗಣತಿ ನಮೂನೆ ಪಡೆದಿಲ್ಲ. ಒಟ್ಟಾರೆ 84.31 ಲಕ್ಷ ಮಂದಿ ಮತದಾರರು ಎಸ್ಐಆರ್ ವ್ಯಾಪ್ತಿಗೆ ಬಂದಿಲ್ಲ. ಹಾಗಂತ ಇವರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಹರಲ್ಲ ಎಂಬುದಾಗಿ ಭಾವಿಸಲಾಗದು ಎಂದರು.

ಸ್ಥಳ ಮಹಜರು ಕಡ್ಡಾಯ:

ಯಾವುದೇ ಮತದಾರರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸುವ ಮುನ್ನ ಬಿಎಲ್‌ಒಗಳು ಸ್ಥಳ ಮಹಜರು ನಡೆಸುವುದು ಕಡ್ಡಾಯವಾಗಿದೆ. ಮತದಾರ ಮೃತಪಟ್ಟಿದ್ದರೆ ಕಡ್ಡಾಯವಾಗಿ ಅವರ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಪ್ರಮಾಣ ಪತ್ರ ಇಲ್ಲದೇ ಇದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವವರಿಂದ ಮತ್ತು ಬಿಎಲ್‌ಎಗಳ ಸಹಿ ಪಡೆದುಕೊಳ್ಳುವುದು ಕಡ್ಡಾಯ. ಒಂದೊಮ್ಮೆ ಮತದಾರರು ಜೀವಂತವಾಗಿದ್ದು ಅವರನ್ನು ‘ಮೃತ’ ಎಂದು ವರ್ಗೀಕರಿಸಿದ್ದರೆ, ಕೂಡಲೇ ಅವರು ಬಿಎಲ್‌ಒ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

ತಮ್ಮ ಗಣತಿ ನಮೂನೆಗಳನ್ನು ತಪ್ಪಾಗಿ ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ ಎಂಬುದನ್ನು ಬಿಎಲ್‌ಒಗಳಿಗೆ ತಿಳಿಸಬೇಕು. ಬಿಎಲ್‌ಒಗಳು ಅದನ್ನು ಇಆರ್‌ಒಗೆ ತಿಳಿಸುತ್ತಾರೆ. ಈಗಾಗಲೇ ಎಎಸ್‌ಡಿಡಿಒ ಎಂದು ವರ್ಗೀಕರಿಸಲಾದ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಣೆ ಮಾಡಲು ಸೂಚಿಸುವ ಅಧಿಕಾರ ಇಆರ್‌ಒಗೆ ಇದೆ. ಗಣತಿ ನಮೂನೆ ಪಡೆದುಕೊಂಡು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ ಬಿಎಲ್ಒಗೆ ಸಲ್ಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ವಿವರಿಸಿದರು.

ಆ.8ವರೆಗೆ ರೋಲ್‌ಬ್ಯಾಕ್‌ಗೆ ಅವಕಾಶ:

ಆಗಸ್ಟ್‌ 8ರವರೆಗೆ ಮಾತ್ರ ಎಎಸ್‌ಡಿಡಿಒ ಮತದಾರರು ತಮ್ಮ ಗಣತಿ ನಮೂನೆಗಳನ್ನು ಹೀಗೆ ಪಡೆದುಕೊಂಡು (ರೋಲ್‌ಬ್ಯಾಕ್‌) ಸಲ್ಲಿಸಲು ಅವಕಾಶವಿದೆ. ಆಗ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಉಳಿಯಲಿದೆ. ಇಲ್ಲವೇ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಹೊಸದಾಗಿ ನೋಂದಾಯಿಸಲು ಅರ್ಜಿ ಸಂಖ್ಯೆ–6 ಅನ್ನು ಸಲ್ಲಿಸಬೇಕಾಗುತ್ತದೆ. ಆ ಅರ್ಜಿಯು ಸರಿಯಿದ್ದು, ಮತದಾರರು ಅರ್ಹರಾಗಿದ್ದರೆ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.

2002ರ ಪಟ್ಟಿಯಲ್ಲಿ ಹೆಸರಿಲ್ಲದವರು 29 ಲಕ್ಷ:

2002ರ ಎಸ್ಐಆರ್ ಪಟ್ಟಿಯಲ್ಲಿ ಪೋಷಕರ ಹೆಸರಿಲ್ಲ ಎಂದು ಗಣತಿ ನಮೂನೆ ಪಡೆದು ಭರ್ತಿ ಮಾಡದೆ ಸುಮ್ಮನಾಗದಿರಿ. ಹೆಸರಿಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಮಾಡಿ ಸ್ಥಳೀಯ ಬಿಎಲ್‌ಓಗಳಿಗೆ ನೀಡಬೇಕು. ಬಿಎಲ್ಓಗಳು ಅರ್ಜಿ ಡಿಜಿಟಲೀಕರಣಗೊಳಿಸುತ್ತಾರೆ. ಆ.17ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಬಳಿಕ ಅಗತ್ಯ ದಾಖಲೆ ಕೋರಿ ಮತದಾರರಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗುತ್ತದೆ. ದಾಖಲಾತಿಗಳನ್ನು ಸಲ್ಲಿಸಿದರೆ ಮತದಾರರ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ. 2002ರ ಎಸ್ಐಆರ್ ಪಟ್ಟಿಯಲ್ಲಿ ಹೆಸರಿಲ್ಲದವರ ಪೈಕಿ 29 ಲಕ್ಷ ಮಂದಿ ಗಣತಿ ನಮೂನೆಯಲ್ಲಿ ಸಹಿ ಮಾಡಿ ನೀಡಿದ್ದಾರೆ ಎಂದರು.

43 ಲಕ್ಷ ಅರ್ಜಿ ಡಿಜಿಟಲೀಕರಣ ಬಾಕಿ:

ರಾಜ್ಯದಲ್ಲಿ 5.54 ಕೋಟಿ ಮತದಾರರ ಪೈಕಿ 43.24 ಲಕ್ಷ ಮತದಾರರ ಗಣತಿ ನಮೂನೆ ಡಿಜಿಟಲೀಕರಣ ಬಾಕಿ ಇದೆ ಎಂದು ಇದೇ ವೇಳೆ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.

ಸ್ಥಳಾಂತರಗೊಂಡವರು ಅಥವಾ ಎಸ್ಐಆರ್ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಫಾರ್ಮ್ 8 ನಮೂನೆ ಪಡೆದು ಭರ್ತಿ ಮಾಡಿ ಬಿಎಲ್‌ಓಗಳಿಗೆ ನೀಡುವಂತೆ ಮನವಿ ಮಾಡಿದರು.

11.40 ಲಕ್ಷ ಆನ್‌ಲೈನ್‌ ಅರ್ಜಿ:

ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗಾಗಿ 3.32 ಲಕ್ಷ (ಫಾರ್ಮ್ 8), ಎನ್ಐಆರ್ ಪ್ರಜೆಗಳು ಪಟ್ಟಿಯಲ್ಲಿ ಸೇರಿಸಲು 2.783 (6 ಎ) ಮಂದಿ ಅರ್ಜಿ ಪಡೆದರೆ, 30,696 ಮತದಾರರ ಗುರುತಿನ ಚೀಟಿ ವಿಳಾಸ ಬದಲಾವಣೆ, ತಿದ್ದುಪಡಿ ಮಾಡಲು ( ಫಾರ್ಮ್ 8) ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಫಾರ್ಮ್ 7) ಅರ್ಜಿ ಪಡೆದಿದ್ದಾರೆ. ಈವರೆಗೂ ಒಟ್ಟು 11.40 ಲಕ್ಷ ಅರ್ಜಿಗಳು ಆನ್‌ಲೈನ್‌ ಮೂಲಕ ಹಾಗೂ ಆಫ್‌ಲೈನ್ ಮೂಲಕ 331 ಅರ್ಜಿಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.

2002ರಲ್ಲಿ ಹೆಸರಿಲ್ಲ ಎಂದು ಕೂರಬೇಡಿ

2002ರ ಎಸ್ಐಆರ್ ಪಟ್ಟಿಯಲ್ಲಿ ಪೋಷಕರ ಹೆಸರಿಲ್ಲ ಎಂದು ಗಣತಿ ನಮೂನೆ ಪಡೆದು ಭರ್ತಿ ಮಾಡದೆ ಸುಮ್ಮನಾಗದಿರಿ. ಹೆಸರಿಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಮಾಡಿ ಬಿಎಲ್‌ಓಗಳಿಗೆ ನೀಡಬೇಕು. ಅವರು ಅರ್ಜಿ ಡಿಜಿಟಲೀಕರಣಗೊಳಿಸುತ್ತಾರೆ. ಆ.17ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಬಳಿಕ ಅಗತ್ಯ ದಾಖಲೆ ಕೋರಿ ಮತದಾರರಿಗೆ ಆಯೋಗದಿಂದ ನೋಟಿಸ್ ನೀಡುತ್ತದೆ. ಆಗ ದಾಖಲಾತಿ ಸಲ್ಲಿಸಿದರೆ ಮತದಾರರ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ.

ರೋಲ್‌ ಬ್ಯಾಕ್‌ಗೆ ಆ.8ವರೆಗೆ ಚಾನ್ಸ್‌

ಆ.8ರವರೆಗೆ ಮಾತ್ರ ಎಎಸ್‌ಡಿಡಿಒ ಮತದಾರರು ತಮ್ಮ ಗಣತಿ ನಮೂನೆ ಪಡೆದುಕೊಂಡು (ರೋಲ್‌ಬ್ಯಾಕ್‌) ಸಲ್ಲಿಸಲು ಅವಕಾಶವಿದೆ. ಆಗ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಉಳಿಯಲಿದೆ. ಇಲ್ಲವೇ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಹೊಸದಾಗಿ ನೋಂದಾಯಿಸಲು ಅರ್ಜಿ ಸಂಖ್ಯೆ–6 ಅನ್ನು ಸಲ್ಲಿಸಬೇಕಾಗುತ್ತದೆ.

ಸಾವನ್ನಪ್ಪಿದವರು 14.99 ಲಕ್ಷ

ಶಾಶ್ವತ ಸ್ಥಳಾಂತರ 51.74 ಲಕ್ಷ

ಬೇರೆಡೆ ಹೆಸರು 5.62 ಲಕ್ಷ

ಎಸ್‌ಐಆರ್‌ಗೆ ಗೈರು 11.61 ಲಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅವಧಿ ಮುಗಿದರೂ ಹುದ್ದೆ ಬಿಡ್ತಿಲ್ಲ ಸಹಕಾರ ಎಂಡಿ !
ಮಾಲೂರು ಜಡ್ಜ್‌ ರಸ್ತೆ ರಂಪಾಟಕ್ಕೆ ಹೈಕೋರ್ಟ್‌ ಗರಂ