ಬೆಂಗಳೂರು : ರಾಜ್ಯದಲ್ಲಿ ಭಾನುವಾರ ಮತ್ತೆ 9 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಎಲ್ಲಾ ಸೋಂಕು ಪ್ರಕರಣ ಬೆಂಗಳೂರು ನಗರದಲ್ಲೇ ವರದಿಯಾಗಿದೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಭಾನುವಾರ ವರದಿಯಾಗಿರುವ ಪ್ರಕರಣಗಳಲ್ಲಿ ಶೇ.8.65 ರಷ್ಟು ಪಾಸಿಟಿವಿಟಿ ದರ ವರದಿಯಾಗಿರುವುದು ಆತಂಕ ಮೂಡಿಸಿದೆ.
ಕಳೆದ 24 ಗಂಟೆಗಳಲ್ಲಿ 104 ಪರೀಕ್ಷೆ ನಡೆಸಿದ್ದು ಈ ಪೈಕಿ 96 ಆರ್‌ಟಿಪಿಸಿಆರ್ ಹಾಗೂ 8 ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಾಗಿದೆ. ಒಟ್ಟು ಪರೀಕ್ಷೆಯಲ್ಲಿ ಶೇ.8.65 ರಷ್ಟು (9) ಮಂದಿಗೆ ಸೋಂಕು ದೃಢಪಟ್ಟಿದ್ದು, ಪರೀಕ್ಷೆಗಳು ಹೆಚ್ಚಾದರೆ ಸೋಂಕು ಹೆಚ್ಚಾಗುವ ಭೀತಿ ಸೃಷ್ಟಿಸಿದೆ.
ಒಟ್ಟು 47 ಸಕ್ರಿಯ ಸೋಂಕಿತರ ಪೈಕಿ ಒಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ 46 ಮಂದಿ ಸೌಮ್ಯ ಲಕ್ಷಣಗಳೊಂದಿಗೆ ಮನೆಯಲ್ಲೇ ಐಸೊಲೇಟ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜ.1ರಿಂದ ಈವರೆಗೆ 98 ಪ್ರಕರಣ ವರದಿಯಾಗಿದ್ದು, 50 ಮಂದಿ ಗುಣಮುಖರಾಗಿದ್ದು ಒಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲಾವಾರು ಸಕ್ರಿಯ ಪ್ರಕರಣ ಪರಿಶೀಲಿಸಿದರೆ ಬೆಂಗಳೂರು ನಗರದಲ್ಲಿ 39, ಮೈಸೂರು 2, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಕ್ರಿಯ ಪ್ರಕರಣ ವರದಿಯಾಗಿದೆ.
ರಾಜ್ಯದಲ್ಲಿ ಲಭ್ಯವಿರುವ ಟೆಸ್ಟಿಂಗ್ ಕಿಟ್ಸ್ಗಳು:
ರ್‍ಯಾಪಿಡ್ ಆ್ಯಂಟಿಜೆನ್ ಕಿಟ್ (ಆರ್‌ಎಟಿ) - 2500
ಜಿನೊಮ್ ಮಾದರಿ ಸಂಗ್ರಹಿಸುವ ಆರ್‌ಎನ್‌ಎ ಕಿಟ್ - 1.30 ಲಕ್ಷ
ವಿಟಿಎಂ (ವೈರಲ್ ಟ್ರಾನ್ಸ್ಪೋರ್ಟ್ ಮೀಡಿಯಂ) -2 ಲಕ್ಷ
ಆರ್‌ಟಿಪಿಸಿಆರ್ ಕಿಟ್ - 5000