ಬೆಂಗಳೂರು, ಬೀದರಲ್ಲಿ ತಲೆಯೆತ್ತಲಿವೆ ಹೊಸ ಪಕ್ಷಿಧಾಮ : ತಮಿಳುನಾಡಿನ ಎಲಗಿರಿಯಲ್ಲಿರುವ ಪಕ್ಷಿ ಪ್ರಪಂಚದ ಮಾದರಿ

Published : Sep 02, 2024, 12:57 PM ISTUpdated : Sep 02, 2024, 12:58 PM IST
Eshwar Khandre

ಸಾರಾಂಶ

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಎಲಗಿರಿಯಲ್ಲಿರುವಂತೆ ರಾಜ್ಯದ ಎರಡು ಕಡೆಗಳಲ್ಲಿ ಪಕ್ಷಿ ಪ್ರಪಂಚ ಸೃಷ್ಟಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ.

ಗಿರೀಶ್‌ ಗರಗ

 ಬೆಂಗಳೂರು : ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಎಲಗಿರಿಯಲ್ಲಿರುವಂತೆ ರಾಜ್ಯದ ಎರಡು ಕಡೆಗಳಲ್ಲಿ ಪಕ್ಷಿ ಪ್ರಪಂಚ ಸೃಷ್ಟಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ.

ರಾಜ್ಯದಲ್ಲಿ 9 ಮೃಗಾಲಯಗಳಿದ್ದು, ಅವುಗಳಲ್ಲಿ 4 ಸಣ್ಣ ಪ್ರಮಾಣದ ಮಕ್ಕಳಿಗಾಗಿ ತೆರೆಯಲಾದ ಮೃಗಾಲಯಗಳಾಗಿವೆ. ಈ ಮೃಗಾಲಯಗಳಲ್ಲಿ ಆನೆ, ಹುಲಿ, ಸಿಂಹ, ಚಿರತೆ, ಚಿಂಪಾಂಜಿ ಹೀಗೆ ದೊಡ್ಡ ಪ್ರಾಣಿಗಳು ಸೇರಿದಂತೆ ಇನ್ನಿತರ ಸರೀಸೃಪ, ಪಕ್ಷಿಗಳನ್ನಿಡಲಾಗಿದ್ದು, ಅವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅದರಲ್ಲೂ ಮೃಗಾಲಯಗಳಲ್ಲಿರುವ ಪಕ್ಷಿಗಳು ಕೇಜ್‌ ಒಳಗೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೀಗ, ಪಕ್ಷಿಗಳ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ರಾಜ್ಯದ ಎರಡು ಕಡೆ ಪಕ್ಷಿ ಪ್ರಪಂಚ ಸೃಷ್ಟಿಸಲಾಗುತ್ತದೆ. ಅದರಲ್ಲಿ, ಪಕ್ಷಿಗಳಿಗೆ ಜನರೇ ಆಹಾರ ನೀಡಿ, ಅವುಗಳನ್ನು ಸ್ಪರ್ಶಿಸಿ ಅನುಭವ ಪಡೆಯುವಂತೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಅರಣ್ಯ ಇಲಾಖೆ ನಿರ್ಧರಿಸಿರುವಂತೆ ಬೆಂಗಳೂರಿನ ಕೊತ್ತನೂರು ಹಾಗೂ ಬೀದರ್‌ನಲ್ಲಿ ಪಕ್ಷಿ ಪ್ರಪಂಚ ನಿರ್ಮಿಸಲಾಗುತ್ತದೆ. ಬೆಂಗಳೂರಿನ ಕೊತ್ತನೂರಿನಲ್ಲಿ ಅರಣ್ಯ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದನ್ನು ಕೆಲ ತಿಂಗಳ ಹಿಂದೆ ತೆರವು ಮಾಡಲಾಗಿದೆ. ಒಟ್ಟು 17 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಅದರಲ್ಲಿ 2.25 ಎಕರೆ ಭೂಮಿಯಲ್ಲಿ ಪಕ್ಷಿ ಜೂ ಸ್ಥಾಪನೆಗೆ ಚರ್ಚಿಸಲಾಗಿದೆ. ಅದೇ ರೀತಿ ಬೀದರ್‌ನಲ್ಲಿನ ಅರಣ್ಯ ಇಲಾಖೆಗೆ ಸೇರಿದ 3ರಿಂದ 4 ಎಕರೆ ಭೂಮಿಯಲ್ಲಿ ಪಕ್ಷಿ ಲೋಕ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.

 ತಮಿಳುನಾಡಿಗೆ ತೆರಳಿ ಅರಣ್ಯ ಸಚಿವರ ಪರಿಶೀಲನೆ: 

ರಾಜ್ಯದ ನಗರ ಪ್ರದೇಶದಲ್ಲಿ ಒತ್ತುವರಿದಾರರಿಂದ ವಶಕ್ಕೆ ಪಡೆದ ಅರಣ್ಯ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೃಗಾಲಯ, ಟ್ರೀ ಪಾರ್ಕ್‌ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರ ಭಾಗವಾಗಿ ಪಕ್ಷಿಲೋಕ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದಕ್ಕಾಗಿ ಹೊರ ರಾಜ್ಯಗಳಲ್ಲಿರುವ ಪಕ್ಷಿ ಲೋಕಗಳ ಪರಿಶೀಲನೆಗೆ ಈಶ್ವರ್‌ ಖಂಡ್ರೆಯೇ ಮುಂದಾಗಿದ್ದಾರೆ.

ಅದರ ಭಾಗವಾಗಿ ಕಳೆದ ವಾರ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಎಲಗಿರಿಯಲ್ಲಿರುವ ಪಕ್ಷಿಧಾಮಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪಕ್ಷಿ ಲೋಕ ಸೃಷ್ಟಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ. ಅಲ್ಲದೆ, ಪಕ್ಷಿ ಧಾಮ ನಿರ್ಮಾಣದ ಯೋಜನಾ ವರದಿ ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ.

ಎಲಗಿರಿಯಲ್ಲಿ 25ಕ್ಕೂ ಹೆಚ್ಚು ವಿಧದ ಪಕ್ಷಿಗಳು

ಎಲಗಿರಿಯಲ್ಲಿ ಖಾಸಗಿ ಸಂಸ್ಥೆಯೊಂದು ಪಕ್ಷಿ ಧಾಮ ನಿರ್ಮಿಸಿದೆ. ಅದರಲ್ಲಿ ದೇಸೀ ಗಿಳಿಗಳು, ಪಾರಿವಾಳಗಳು ಸೇರಿದಂತೆ ವಿದೇಶದ ಮಕಾವ್‌, ಫೀಂಚಸ್‌, ಎಮು, ಆಸ್ಟ್ರಿಚ್‌, ಬಾತುಕೋಳಿಗಳು ಸೇರಿದಂತೆ 25ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳಿವೆ. ಅವುಗಳಲ್ಲಿ ಗಿಳಿಗಳನ್ನು ಏವರಿಯಲ್ಲಿಡಲಾಗಿದ್ದು, ಅದರೊಳಗೆ ಜನರನ್ನು ಬಿಡಲಾಗುತ್ತದೆ. ಆ ಗಿಳಿಗಳಿಗೆ ಆಹಾರ ತಿನ್ನಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಆ ಗಿಳಿಗಳು ಜನರ ಮೈಮೇಲೆ ಬಂದು ಕುಳಿತುಕೊಳ್ಳುತ್ತವೆ. ಅಲ್ಲದೆ, ಗಿಳಿ ಜಾತಿಯ ಹಕ್ಕಿಗಳನ್ನು ಹೊರತುಪಡಿಸಿ ಸಾಮಾನ್ಯ ಕೋಳಿ ಜಾತಿಗೆ ಸೇರಿದ ಸಿಲ್ಕ್‌ ಚಿಕನ್‌, ಬ್ರಹ್ಮ ಚಿಕನ್‌ಗಳೂ ಅಲ್ಲಿ ಪ್ರದರ್ಶನಗೊಳ್ಳುತ್ತಿವೆ. ಹೀಗೆ ಹಲವು ವಿಧದ ಹಕ್ಕಿಗಳನ್ನಿಟ್ಟುಕೊಂಡು ಪಕ್ಷಿ ಧಾಮ ನಿರ್ಮಿಸಲಾಗಿದೆ.

ಬೆಂಗಳೂರಿನ ಕೊತ್ತನೂರಿನಲ್ಲಿ ಒತ್ತುವರಿದಾರರಿಂದ ವಶಕ್ಕೆ ಪಡೆಯಲಾಗಿರುವ ಅರಣ್ಯ ಭೂಮಿಯಲ್ಲಿ ಮತ್ತು ಬೀದರ್‌ನಲ್ಲಿ ದೇಶಕ್ಕೇ ಮಾದರಿಯಾಗುವಂತಹ ಪಕ್ಷಿಲೋಕವನ್ನು ನಿರ್ಮಿಸುವ ಉದ್ದೇಶವಿದೆ. ಅದಕ್ಕಾಗಿ ತಮಿಳುನಾಡಿನ ವೆಲ್ಲೂರು ಸಮೀಪದ ಎಲಗಿರಿ ಬೆಟ್ಟದಲ್ಲಿರುವ ಪಕ್ಷಿಧಾಮಕ್ಕೆ ಭೇಟಿ ನೀಡಿ ವೀಕ್ಷಿಸಿದ್ದೇನೆ. ಅಲ್ಲಿನ ವ್ಯವಸ್ಥೆಗಳಂತೆಯೇ ಇಲ್ಲಿಯೂ ಪಕ್ಷಿಧಾಮ ಸೃಷ್ಟಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

- ಈಶ್ವರ ಬಿ. ಖಂಡ್ರೆ ಅರಣ್ಯ ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರೈಲುಗಳಲ್ಲಿ ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಯತೀಂದ್ರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಕಿಚ್ಚು