ಅಪಘಾತ ಪ್ರಕರಣ: ಬಿಬಿಎಂಪಿ, ಗುತ್ತಿಗೆದಾರರ ಪ್ರತಿವಾದಿ ಮಾಡಲು ಕೋರಿದ್ದ ಅರ್ಜಿ ವಜಾ

Published : May 17, 2025, 10:40 AM IST
karnataka highcourt

ಸಾರಾಂಶ

ಬಿಬಿಎಂಪಿ ಮತ್ತು ಗುತ್ತಿಗೆದಾರರನ್ನು ಪ್ರತಿವಾದಿ (ಪಾರ್ಟಿ) ಮಾಡುವಂತೆ ಕೋರಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

 ಬೆಂಗಳೂರು : ರಸ್ತೆ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯತನದ ಜೊತೆಗೆ ಗುಂಡಿ ಬಿದ್ದ ರಸ್ತೆಯು ಕಾರಣ ಆಗಿರುವುದರಿಂದ ಬಿಬಿಎಂಪಿ ಮತ್ತು ಗುತ್ತಿಗೆದಾರರನ್ನು ಪ್ರತಿವಾದಿ (ಪಾರ್ಟಿ) ಮಾಡುವಂತೆ ಕೋರಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಐಸಿಐಸಿಐ ಲೋಂಬರ್ಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

2022ರ ಅ.19ರಂದು ಬೆಂಗಳೂರಿನಲ್ಲಿ ಕೇರಳ ಮೂಲದ ಆರ್.ಎಂ. ರಾಹುಲ್‌ ಮತ್ತು ಅರ್ಷಿದ್ ಅವರಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಹಿಂಬದಿ ಸವಾರ ಅರ್ಷಿದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಸಂಚಾರ ಪೊಲೀಸರು, ಅಪಘಾತ ಮಾಡಿದ ಕಾರು ಚಾಲಕ ಪವನ್ ಕುಮಾರ್ ಜೊತೆಗೆ ಬಿಬಿಎಂಪಿ, ಗುತ್ತಿಗೆದಾರರು ಮತ್ತು ಬೈಕ್ ಮಾಲೀಕ ರಾಹುಲ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅಪಘಾತಕ್ಕೆ ರಸ್ತೆ ಗುಂಡಿಯೂ ಕಾರಣವಾಗಿದೆ ಎಂದು ಹೇಳಿದ್ದರು.

ಮತ್ತೊಂದೆಡೆ ಮೃತನ ಕುಟುಂಬದವರು 20 ಲಕ್ಷ ರು. ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ಕ್ಲೇಮ್ ನ್ಯಾಯಮಂಡಳಿಗೆ (ಎಂಎಸಿಟಿ) ಅರ್ಜಿ ಸಲ್ಲಿಸಿದ್ದರು.

ವಿಮಾ ಕಂಪನಿಯಾದ ಐಸಿಐಸಿಐ ಲೋಂಬರ್ಡ್‌, ಪ್ರಕರಣದಲ್ಲಿ ಯಾರ ಹೊಣೆ ಎಷ್ಟು ಎಂಬುದನ್ನು ನಿರ್ಧರಿಸಲು ಬೈಕ್ ಮಾಲೀಕ, ವಿಮಾದಾರರು, ಬಿಬಿಎಂಪಿ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಪ್ರತಿವಾದಿಯನ್ನಾಗಿ ಮಾಡಬೇಕು. ಗುತ್ತಿಗೆದಾರರು ಡಾಂಬರು ಹಾಕುವಾಗ ಕಳಪೆ ಕಾಮಗಾರಿ ಮಾಡಿದ ಪರಿಣಾಮ ಗುಂಡಿಗಳು ಬಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ನ್ಯಾಯಮಂಡಳಿ ಎದುರು ವಾದಿಸಿತ್ತು. ಆದರೆ, ವಿಮಾ ಕಂಪನಿಯ ಅರ್ಜಿಯನ್ನು ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.

ಒಪ್ಪದ ಹೈಕೋರ್ಟ್‌

ಮೃತಪಟ್ಟಿರುವ ಬೈಕ್ ಚಾಲಕ ಮತ್ತು ಕಾರು ಚಾಲಕನ ನಿರ್ಲಕ್ಷ್ಯತನದ ಜೊತೆಗೆ ರಸ್ತೆ ಗುಂಡಿಗಳು ಇದ್ದವು ಎಂದು ತನಿಖೆಯಲ್ಲಿ ಹೇಳಲಾಗಿದೆ. ಹೀಗಾಗಿ, ಇದೊಂದು ಸಮಗ್ರ ನಿರ್ಲಕ್ಷ್ಯತನ ಪ್ರಕರಣ. ಆದರೆ, ಪರಿಹಾರ ವಿತರಣೆಗೆ ಇಬ್ಬರನ್ನು (ವಿಮಾ ಕಂಪನಿ ಮತ್ತು ಇತರರು ) ಹೊಣೆಗಾರರನ್ನು ನಿಗದಿಪಡಿಸಲಾಗದು ಎಂದು ಅನೇಕ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಹೇಳಿರುವುದನ್ನು ಉಲ್ಲೇಖಿಸಿದ ಹೈಕೋರ್ಟ್, ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ