;Resize=(412,232))
ಬೆಂಗಳೂರು : ರೈತರು ಕೃಷಿ ಜಮೀನನ್ನು ದೀರ್ಘಾವಧಿ ಕಾಲಕ್ಕೆ ಗುತ್ತಿಗೆ ನೀಡಲು ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸ್ವಾಮಿ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಕೃಷಿ ಮೇಳ’ಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಣ್ಣ ಸಣ್ಣ ರೈತರು ಕೃಷಿಯಿಂದ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಭೂಮಿಯನ್ನು 10 ರಿಂದ 20 ವರ್ಷ ಗುತ್ತಿಗೆಗೆ ಕೊಡಿಸಬೇಕು. ಪ್ರತಿ ವರ್ಷ ರೈತರಿಗೆ ಇಂತಿಷ್ಟು ಹಣ ಪಾವತಿಸುತ್ತೇವೆ ಎಂಬ ಬೇಡಿಕೆ ಹಲವರಿಂದ ವ್ಯಕ್ತವಾಗುತ್ತಿದೆ. ಇದು ಉತ್ತಮವಾದ ಬೆಳವಣಿಗೆಯಾಗಿದ್ದು, ಪ್ರೋತ್ಸಾಹ ನೀಡಲು ಸರ್ಕಾರದಿಂದ ಹೊಸ ಯೋಜನೆ ತಯಾರು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಾವಿರಾರು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡ ನಂತರ ಕೃಷಿಯತ್ತ ಮುಖ ಮಾಡಿದ್ದಾರೆ. ಕೃಷಿ ಭೂಮಿಯನ್ನು ರೈತರಿಂದ ಗುತ್ತಿಗೆ ಪಡೆದುಕೊಂಡು ರೈತ ಉತ್ಪಾದಕ ಸಂಸ್ಥೆ (ಎಫ್‌ಟಿಓ)ಗಳನ್ನು ಸ್ಥಾಪಿಸಿಕೊಂಡು ಬೇಡಿಕೆಗೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದು ರಫ್ತು ಮಾಡಿ ಲಾಭಗಳಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಕೃಷಿ ಕೇವಲ ಉದ್ಯೋಗವಲ್ಲ. ಅದೊಂದು ಸಂಸ್ಕೃತಿ, ಜೀವನ ಪದ್ಧತಿಯಾಗಿದ್ದು ಆರ್ಥಿಕತೆಯ ಜೀವನಾಡಿಯಾಗಿದೆ. ರೈತರ ಆದಾಯ ಹೆಚ್ಚಿಸಲು 5 ಕೃಷಿ ವಿವಿಗಳು ಕಾರ್ಯೋನ್ಮುಖವಾಗಿವೆ. ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕಿನಲ್ಲಿ ಬರ ಪರಿಸ್ಥಿತಿ ಇದೆ. 2025ರಲ್ಲಿ 20.91 ಲಕ್ಷ ರೈತರು ರಾಜ್ಯದಲ್ಲಿ ಬೆಳೆ ವಿಮೆ ಮಾಡಿಸಿದ್ದರೆ, ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆ 37.5 ಲಕ್ಷಕ್ಕೆ ಏರಿಕೆಯಾಗಿ ದಾಖಲೆ ನಿರ್ಮಾಣವಾಗಿದೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದರು.
ಬರಗಾಲದ ಹಿನ್ನೆಲೆಯಲ್ಲಿ ರೈತರು ಮಳೆ ನೀರು ಸಂಗ್ರಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹನಿ ಮತ್ತು ತುಂತುರು ನೀರಾವರಿ ಬಳಸಬೇಕು. ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಕೃಷಿ ವಿವಿಗಳು ಸಂಶೋಧನೆ ನಡೆಸಿ ಅವುಗಳನ್ನು ರೈತರಿಗೆ ತಲುಪಿಸಬೇಕು. ರೈತರು ತಾಂತ್ರಿಕತೆ ಬಳಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿ ಹೊರ ತಂದಿರುವ ನೂತನ ತಳಿಗಳಾದ ಜಿಪಿಯು-101 ರಾಗಿ, ಕೆಬಿಜಿಎ18 ಅವರೆ ತಳಿ, ಎಂಎಎಚ್ 20-45 ಹೈಬ್ರಿಡ್ ಮುಸುಕಿನ ಜೋಳವನ್ನು ಲೋಕಾರ್ಪಣೆಗೊಳಿಸಲಾಯಿತು.
ಹಾಸನ ಜಿಲ್ಲೆಯ ಲಾಳನಕೆರೆಯ ಪೂರ್ಣಚಂದ್ರ, ದೊಡ್ಡಬಳ್ಳಾಪುರ ತಾಲೂಕು ನಾರಸಿಂಹನಹಳ್ಳಿಯ ಬಿ.ಶ್ರೀಕಾಂತ್, ಹಾಡೋನಹಳ್ಳಿಯ ಎಚ್.ಪಿ.ರೂಪ, ಚಿಕ್ಕಬಳ್ಳಾಪುರದ ಕುರುಟಹಳ್ಳಿಯ ಸಿ.ಆರ್.ರಾಧಕೃಷ್ಣ, ತುಮಕೂರಿನ ತಡಸೂರಿನ ಟಿ.ಎನ್.ಯೋಗಾನಂದಮೂರ್ತಿ, ಮಂಡ್ಯ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಮಟ್ಟದ ಪ್ರಗತಿಪರ ರೈತ, ರೈತ ಮಹಿಳೆ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ, ರೈತ ಮಹಿಳೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ರೈತರಿಗೆ ಬೆಳೆ ವಿಮೆ ಹಣ ಕೊಡಿಸಲು ಶೋಭಾ ಕರಂದ್ಲಾಜೆ ಆಗ್ರಹ:
ಬರದಿಂದಾಗಿ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಸಚಿವ ನರೇಂದ್ರ ಸ್ವಾಮಿ ಅವರು ವಿಮಾ ಕಂಪೆನಿಗಳೊಂದಿಗೆ ಮಾತನಾಡಿ ರೈತರಿಗೆ ನ್ಯಾಯಯುತವಾಗಿ ಬೆಳೆ ವಿಮೆ ಹಣ ಕೊಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬರವಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬದುಕು ಹಸನು ಮಾಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೃಷಿ ಸಚಿವರು ವಿಮಾ ಕಂಪೆನಿಗಳೊಂದಿಗೆ ಮಾತನಾಡಿ ರೈತರಿಗೆ ನ್ಯಾಯಯುತವಾಗಿ ಬರಬೇಕಿರುವ ಬೆಳೆ ವಿಮೆಯ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.