ಪಹಲ್ಗಾಂ ಹತ್ಯೆ ಘಟನೆ : ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದ 178 ಕನ್ನಡಿಗರು

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಿಂದ ಸಮಸ್ಯೆಗೆ ಸಿಲುಕಿದ್ದ 178 ಕನ್ನಡಿಗರನ್ನು ಹೊತ್ತು ಶ್ರೀನಗರದಿಂದ ಹೊರಟಿದ್ದ ವಿಶೇಷ ವಿಮಾನ ಗುರುವಾರ ಮಧ್ಯಾಹ್ನ 1.30ರ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನಕ್ಕೆ ಸುಕ್ಷಿತವಾಗಿ ಬಂದಿಳಿಯಿತು.

 ಬೆಂಗಳೂರು :  ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಿಂದ ಸಮಸ್ಯೆಗೆ ಸಿಲುಕಿದ್ದ 178 ಕನ್ನಡಿಗರನ್ನು ಹೊತ್ತು ಶ್ರೀನಗರದಿಂದ ಹೊರಟಿದ್ದ ವಿಶೇಷ ವಿಮಾನ ಗುರುವಾರ ಮಧ್ಯಾಹ್ನ 1.30ರ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನಕ್ಕೆ ಸುಕ್ಷಿತವಾಗಿ ಬಂದಿಳಿಯಿತು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮತ್ತು ಹಿರಿಯ ಪೊಲೀಸ್‌ ಅಧಿಕಾರಿ ಆರ್‌.ಚೇತನ್‌ ಅವರ ನೇತೃತ್ವದ ರಾಜ್ಯ ತಂಡ 178 ಕನ್ನಡಿಗರನ್ನು ಸಂಪರ್ಕಿಸಿ ಸುರಕ್ಷಿತವಾಗಿ ತವರಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಮಂಗಳವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕಾಶ್ಮೀರಕ್ಕೆ ತೆರಳಿದ್ದ ತಂಡ ಬುಧವಾರ ಇಡೀ ದಿನ ಕನ್ನಡಿಗರು ಉಳಿದಿದ್ದ ಹೋಟೆಲ್‌ಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿತ್ತು. ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌ ಕರೆದೊಯ್ಯುವ ಅಭಯ ನೀಡಿ ಚಾರ್ಟೆಡ್‌ ವಿಮಾನದ ವ್ಯವಸ್ಥೆ ಮಾಡಿತ್ತು. ಕನ್ನಡಿಗರನ್ನು ಹೊತ್ತ ವಿಮಾನವು ಗುರುವಾರ ಬೆಳಗ್ಗೆ ಶ್ರೀನಗರದಿಂದ ಹೊರಟು ದೆಹಲಿ ಮಾರ್ಗವಾಗಿ ಮಧ್ಯಾಹ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಬೆಂಗಳೂರು ತಲುಪಿದ ಕನ್ನಡಿಗರು ನಿಟ್ಟುಸಿರು ಬಿಟ್ಟರು, ತಾವು ಅನುಭವಿಸಿದ ಕರಾಳ ಘಟನೆಯನ್ನು ಹಂಚಿಕೊಂಡರು. ಇಂತಹ ಘಟನೆಗೆ ಮತ್ತೆ ಅವಕಾಶವಾಗದಂತೆ ಕೇಂದ್ರ ಸರ್ಕಾರ ಬಿಗಿ ಭದ್ರತೆಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅದೇ ವಿಮಾನದಲ್ಲೇ ಬೆಂಗಳೂರಿಗೆ ಬಂದಿಳಿದ ಸಂತೋಷ್‌ ಲಾಡ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿಯವರು ನನಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಸುಕ್ಷಿತವಾಗಿ ಎಲ್ಲ ಕನ್ನಡಿಗರನ್ನು ಕರೆತರಲಾಗಿದೆ. ಉಗ್ರರ ದಾಳಿಯನ್ನು ಕಣ್ಣಾರೆ ಕಂಡ ಕುಟುಂಬದವರ ಸ್ಥಿತಿ ಭೀಕರವಾಗಿತ್ತು. ಅದನ್ನು ಕೇಳಿ ಮೈ ನಡುಗಿತು. ಈ ಭಯದಿಂದ ಹೊರಬರಲು ಇನ್ನಷ್ಟು ದಿನಗಳಾಗಬಹುದು. ಉಗ್ರರ ದಾಳಿಗೆ ಕೇಂದ್ರ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಬೇಕು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎಂದರು.

ಸಚಿವ ಲಾಡ್‌ಗೆ ಅವರಿಗೆ ಕೃತಜ್ಞತೆ

ಕಾಶ್ಮೀರದಿಂದ ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಿದ ಸಚಿವ ಸಂತೋಷ್‌ ಲಾಡ್‌ ಅವರಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ. ಊರಿಗೆ ಮರಳುವ ಆತಂಕ ಮತ್ತು ಭಯದಲ್ಲಿದ್ದವರಿಗೆ ದೇವರಂತೆ ಸಚಿವರು ಬಂದು ಇಲ್ಲಿಗೆ ಕರೆತಂದರು. ಇವರ ಸಹಾಯವನ್ನು ಎಂದೂ ಮರೆಯಲಾಗದು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ. ಸ್ಥಳೀಯ ಕಾಶ್ಮೀರಿಗರು ನಮಗೆ ಅತ್ಯುತ್ತಮ ಆತಿಥ್ಯ ನೀಡಿದ್ದಕ್ಕೂ ಕೃತಜ್ಞತೆ ಸಲ್ಲಿಸಿದ ಪ್ರವಾಸಿಗರು, ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. 

Share this article