ಮಂಗಳೂರು : ಧರ್ಮಸ್ಥಳ ಗ್ರಾಮದ ತಲೆ ಬುರುಡೆ ಪ್ರಕರಣದಲ್ಲಿ ಸಿಲುಕಿಕೊಂಡು ಎಸ್ಐಟಿ ಬಂಧನ ಭೀತಿಯಲ್ಲಿದ್ದಾಗ ದೂರುದಾರ ಚಿನ್ನಯ್ಯನ ನೆರವಿಗೆ ಯಾರೂ ಇರಲಿಲ್ಲ.
ತಲೆ ಬುರುಡೆಯನ್ನು ಕೋರ್ಟಿಗೆ ಹಾಜರುಪಡಿಸುವ ವೇಳೆ ವಕೀಲರಾದ ಓಜಸ್ವಿ ಗೌಡ, ನಿತಿನ್ ದೇಶಪಾಂಡೆ ಮತ್ತಿತರ ವಕೀಲರ ದಂಡೇ ಕಂಡುಬಂದಿತ್ತು. ಬಳಿಕ 13 ಜಾಗಗಳಲ್ಲಿ ಅನಾಥ ಶವಗಳ ಪತ್ತೆ, ಅಗೆತ ಕಾರ್ಯಾಚರಣೆ ವೇಳೆಯೂ ನಾಲ್ವರು ವಕೀಲರು ಅನಾಮಿಕ ದೂರುದಾರನ ಜೊತೆಗಿದ್ದರು.
ಮಾತ್ರವಲ್ಲ ಈ ಇಡೀ ತಲೆಬುರುಡೆ ಪ್ರಕರಣದಲ್ಲಿ ವಕೀಲರು ಹೇಳಿದಂತೆ ಅನಾಮಿಕ ಮುನ್ನಡೆದಿದ್ದ. ಆದರೆ ಎಸ್ಐಟಿ ಕಾರ್ಯಾಚರಣೆಯಲ್ಲಿ ತಲೆ ಬುರುಡೆ ರಹಸ್ಯ ಪತ್ತೆಯಾಗದೇ ಇದ್ದಾಗ ಕೊನೆಯ ದಿನಗಳಲ್ಲಿ ಆತನ ಜೊತೆಗಿದ್ದ ವಕೀಲರು ಆತನಿಂದ ದೂರವಾಗಿದ್ದರು. ಎಸ್ಐಟಿ ತಂಡ ಆತನನ್ನು ಶುಕ್ರವಾರ ವಿಚಾರಣೆ ನಡೆಸಿ, ಬಂಧಿಸಿದಾಗಲೂ ವಕೀಲರ ತಂಡ ನೆರವಿಗೆ ಬಂದಿರಲಿಲ್ಲ ಎನ್ನಲಾಗಿದೆ. ದೂರುದಾರನಾಗಿದ್ದ ಚಿನ್ನಯ್ಯ, ಯಾರದೋ ಮಾತನ್ನು ನಂಬಿ, ಬುರುಡೆ ಪ್ರಹಸನಕ್ಕೆ ಮುಂದಾಗಿ ಏಕಾಂಗಿಯಾಗಿಯೇ ಪೊಲೀಸರ ಸೆರೆಯಾಗಬೇಕಾಯಿತು.