;Resize=(412,232))
ರುದ್ರಯ್ಯ ಎಸ್.ಎಸ್
ನವದೆಹಲಿ : ಕೇಂದ್ರ ಸರ್ಕಾರದ ಆತ್ಮನಿರ್ಭರ ಮತ್ತು ವಿಕಸಿತ ಭಾರತ ಪರಿಕಲ್ಪನೆಗೆ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಶಕ್ತಿ ತುಂಬಲಿದ್ದು, 2030ರೊಳಗೆ 35 ಬಿಲಿಯನ್ ಡಾಲರ್ (3.14 ಲಕ್ಷ ಕೋಟಿ) ಗಿಂತ ಹೆಚ್ಚು ಹೂಡಿಕೆ ಮಾಡಲು ನಿರ್ಧರಿಸಿದೆ. ಆ ಮೂಲಕ ಮುಂದಿನ 5 ವರ್ಷಗಳಲ್ಲಿ 38 ಲಕ್ಷಕ್ಕೂ ಅಧಿಕ ನೇರ-ಪರೋಕ್ಷ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.
ನವದೆಹಲಿಯ ಭಾರತ ಮಂಟಪದಲ್ಲಿ ಇತ್ತೀಚೆಗೆ ನಡೆದ 6ನೇ ಆವೃತ್ತಿಯ ‘ಅಮೆಜಾನ್ ಸಂಭವ-2025’ ಉದ್ಯಮಿಗಳ ಶೃಂಗಸಭೆಯಲ್ಲಿ ಅಮೆಜಾನ್ ಸಂಸ್ಥೆಯ ಉಪಾಧ್ಯಕ್ಷ ಅಮಿತ್ ಅಗರ್‌ವಾಲ್ ಈ ಕುರಿತು ಘೋಷಣೆ ಮಾಡಿದರು. ಶೃಂಗದಲ್ಲಿ ಮಾತನಾಡಿದ ಅಗರ್‌ವಾಲ್, ಸಂಸ್ಥೆಯ ಮುಂದಿನ 5 ವರ್ಷಗಳ ಯೋಜನೆಯನ್ನು ಪ್ರಕಟಿಸಿದರು.
ಭವಿಷ್ಯದಲ್ಲಿ ಸಂಸ್ಥೆಯು ಎಐ-ಡಿಜಿಟಲೀಕರಣ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಈ 3 ವಿಷಯಗಳಿಗೆ ಒತ್ತು ನೀಡಲಿದೆ. ಅತಿದೊಡ್ಡ ವಿದೇಶಿ ಹೂಡಿಕೆದಾರ ಕಂಪನಿಯಾಗಿರುವ ಅಮೆಜಾನ್, 2010ರಿಂದ 2025ರವರೆಗೆ 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 2.8 ಮಿಲಿಯನ್ (28 ಲಕ್ಷ) ಉದ್ಯೋಗ ಒದಗಿಸಿದೆ. 12 ಮಿಲಿಯನ್ ಸಣ್ಣ ಉದ್ಯಮಗಳನ್ನು ಡಿಜಿಟಲೀಕರಣಗೊಳಿಸಿದ್ದು, ಇ-ಕಾಮರ್ಸ್ ಮೂಲಕ 20 ಬಿಲಿಯನ್ ಡಾಲರ್ ರಫ್ತು ವ್ಯವಹಾರ ನಡೆಸಿದೆ. 2030ರವರೆಗೆ ತನ್ನ ಎಲ್ಲಾ ವ್ಯವಹಾರಗಳಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಹೆಚ್ಚಿಸಲಿದ್ದು, 3.8 ಮಿಲಿಯನ್ (38 ಲಕ್ಷ) ಉದ್ಯೋಗ ಸೃಷ್ಟಿಸಲಿದೆ ಹಾಗೂ 4 ಮಿಲಿಯನ್ (40 ಲಕ್ಷ) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿದ್ದು, ನಗರ ಹಾಗೂ ಪಟ್ಟಣಗಳಲ್ಲಿ ಅಮೆಜಾನ್ ಸೇವೆಯನ್ನು ವಿಸ್ತರಿಸಿದೆ. ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಮೂಲಕ ಮೇಡ್-ಇನ್-ಇಂಡಿಯಾಗೆ ಒತ್ತು ನೀಡುತ್ತಿದೆ. ಕಳೆದ 5 ವರ್ಷದಲ್ಲಿ ಅಮೆಜಾನ್ ನೌ, ಅಮೆಜಾನ್ ಬಜಾರ್, ಹೆಲ್ತ್ ಕೇರ್, ಡಯಾಗ್ನೋಸ್ಟಿಕ್ಸ್, ವಿಡಿಯೋ ಕನ್ಸಲ್ಟೇಶನ್ಸ್ ಎಂಬ 5 ವಿನೂತನ ಸೇವೆಗಳನ್ನು ಒದಗಿಸಿದೆ ಎಂದರು.
ಅಮೆಜಾನ್.ಇನ್ ನಲ್ಲಿ ಮಾರಾಟಗಾರರು ಎಐ ಸಾಧನಗಳನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಗೆ ಇನ್ನೂ ಅಧಿಕ ಆದ್ಯತೆ ನೀಡಲಾಗುವುದು. ವಿವಿಧ ಆಯಾಮಗಳ ಮೂಲಕ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಗ್ರಾಹಕರಿಗೆ ಎಐ ಪ್ರಯೋಜನಗಳನ್ನು ತಲುಪಿಸಲಾಗುವುದು ಎಂದು ಅಗರ್‌ವಾಲ್ ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರ್ಯಕ್ರಮದಲ್ಲಿ ಸ್ಥಾಪಿಸಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ವಿನೂತನ ಸಂಶೋಧನೆ ಹಾಗೂ ಉತ್ಪನ್ನಗಳನ್ನು ಗಮನಿಸಿ ಉದ್ಯಮಿಗಳಿಗೆ ಶುಭ ಕೋರಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಸ್ಮೃತಿ ಮಂದನಾ, ಹರ್ಮನ್‌ಪ್ರಿತ್ ಕೌರ್ ಭಾಗಿಯಾಗಿದ್ದರು.