ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ

Published : Oct 11, 2025, 09:33 AM IST
Ambulance

ಸಾರಾಂಶ

ರಾಜ್ಯದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಯನ್ನು ಆರೋಗ್ಯ ಇಲಾಖೆ ವತಿಯಿಂದಲೇ ಜಾರಿಗೊಳಿಸುತ್ತಿದ್ದು, ಇದಕ್ಕೆ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಪಡೆಯಲು ಮಂಜೂರಾತಿ ನೀಡಲಾಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಯನ್ನು ಆರೋಗ್ಯ ಇಲಾಖೆ ವತಿಯಿಂದಲೇ ಜಾರಿಗೊಳಿಸುತ್ತಿದ್ದು, ಇದಕ್ಕೆ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಪಡೆಯಲು ಮಂಜೂರಾತಿ ನೀಡಲಾಗಿದೆ.

ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿ ಶಿಫ್ಟ್‌, ರಾತ್ರಿ ಪಾಳಿ ಶಿಫ್ಟ್‌ ಸೇರಿ 1,700 ಪೈಲಟ್‌ (ಚಾಲಕರು) 1,700 ಇಎಂಟಿ (ತುರ್ತು ಚಿಕಿತ್ಸಾ ತಂತ್ರಜ್ಞ), ಜಿಲ್ಲಾ ವ್ಯವಸ್ಥಾಪಕರು ಹಾಗೂ ಫ್ಲೀಟ್‌ ವ್ಯವಸ್ಥಾಪಕರು 62, ಎಸ್‌ಪಿಎಂ ಸಿಬ್ಬಂದಿ 5 ಮಂದಿ ನೇಮಕ ಮಾಡಲಾಗುವುದು.

ಸಹಾಯವಾಣಿ ಸ್ಥಾಪನೆ ಮಾಡಿ ನಿರ್ವಹಣೆ ಮಾಡಲು ಕೇಂದ್ರೀಕೃತ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌, ಜಿಲ್ಲಾ ಕಂಟ್ರೋಲ್‌ ರೂಂ ಸ್ಥಾಪಿಸಿ ಆಡಳಿತ ಸಿಬ್ಬಂದಿ, ನಿರ್ವಹಣಾ ಸಿಬ್ಬಂದಿ, ಕಾಲ್‌ ಸೆಂಟರ್ ಸಿಬ್ಬಂದಿ, ತಂತ್ರಜ್ಞರು ಸೇರಿ ವಿವಿಧ ಸಿಬ್ಬಂದಿ ನೇಮಿಸಬೇಕಿದೆ. ಹೀಗಾಗಿ 224 ಮಂದಿ ಸಿಬ್ಬಂದಿ ನೇಮಿಸಲು ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ.

ಪ್ರಾಥಮಿಕ ಹಂತದಲ್ಲಿ ಅನುಷ್ಠಾನಗೊಳಿಸಲು ಅಂದಾಜಿಸಲಾದ ಮಾನವ ಸಂಪನ್ಮೂಲಕ್ಕೆ ಒಪ್ಪಿಗೆ ನೀಡಿದ್ದು, ತುರ್ತು ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಸೂಚನೆಗೆ ತಕ್ಕಂತೆ ಬದಲಾವಣೆ ಮಾಡಲು ಅವಕಾಶ ನೀಡಿ ಅನುಮೋದನೆ ನೀಡಲಾಗಿದೆ.----

5 ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗೆಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ

 ಬೆಂಗಳೂರು :  ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಯೋಜನೆಯಡಿ 5 ಕ್ರಿಟಿಕಲ್ ಕೇರ್ ಬ್ಲಾಕ್‌ಗೆ ಅಗತ್ಯ ಇರುವ 168 ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.

ವಿಜಯಪುರ (100 ಹಾಸಿಗೆ), ತುಮಕೂರು (100 ಹಾಸಿಗೆ), ಕೋಲಾರ (50 ಹಾಸಿಗೆ), ಉಡುಪಿ (50 ಹಾಸಿಗೆ) ಮತ್ತು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ (100 ಹಾಸಿಗೆ)ಗಳ ಕ್ರಿಟಿಕಲ್ ಕೇರ್ ಬ್ಲಾಕ್‌ಗಳು ಕಾರ್ಯನಿರ್ವಹಿಸುವಂತೆ ಮಾಡಲು ಸಿಬ್ಬಂದಿ ಅಗತ್ಯವಿದೆ.

ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗಳಿಗೆ ಅಗತ್ಯ ಇರುವ ಶಸ್ತ್ರಚಿಕಿತ್ಸಕರು, ಫಿಜಿಷಿಯನ್‌, ವಿಕಿರಣಶಾಸ್ತ್ರಜ್ಞ, ಶುಶ್ರೂಷಕರು, ಗ್ರೂಪ್ -ಡಿ ದರ್ಜೆ ಸೇರಿ ಎಂಟು ವಿಭಾಗಗಳ ಒಟ್ಟು 168 ನೌಕರರ ನೇಮಕಕ್ಕೆ ಅನುಮೋದನೆ ನೀಡಲಾಗಿದೆ.

ಸಿಬ್ಬಂದಿ ವೇತನ ಹಾಗೂ ನಿರ್ವಹಣಾ ವೆಚ್ಚವನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಯೋಜನೆಯಡಿ ಭರಿಸಲು ಆದೇಶದಲ್ಲಿ ತಿಳಿಸಲಾಗಿದೆ.

PREV
Read more Articles on

Recommended Stories

ಯಾವಾಗ ಬೇಕಿದ್ದರೂ ಸಂಪುಟ ಪುನರ್‌ ರಚನೆ : ಗುಂಡೂರಾವ್‌
9 ತಿಂಗಳಲ್ಲಿ 158 ಕಾರ್ಖಾನೆಗಳ ಮುಚ್ಚಲು ಮಂಡಳಿಯ ನೋಟಿಸ್‌