ಮಂಗಳೂರು/ ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ನಾಲ್ಕನೇ ದಿನ ಶುಕ್ರವಾರ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಈ ವಿಚಾರಣೆಯಲ್ಲಿ ಆರೋಪ ಮಾಡಿದ ಎಲ್ಲವೂ ಸುಳ್ಳು ಎಂದು ಸುಜಾತಾ ಭಟ್ ಒಪ್ಪಿಕೊಂಡಿದ್ದರು. ಇದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅವರ ವಿಚಾರಣೆಯನ್ನು ಸದ್ಯದ ಮಟ್ಟಿಗೆ ಮುಕ್ತಾಯಗೊಳಿಸಿದ್ದಾರೆ.
ಸುಜಾತಾ ಭಟ್ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮಾತ್ರ ದೂರು ದಾಖಲಾಗಿದೆ ಹಾಗೂ ವೃದ್ಧೆಯಾಗಿರುವ ಕಾರಣ ಸುಜಾತಾ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ, ಪ್ರಕರಣದಲ್ಲಿ ಇವರನ್ನು ಮಾಫಿ ಸಾಕ್ಷಿ ಎಂದು ಎಸ್ಐಟಿ ಪರಿಗಣಿಸಲಿದೆ.
ಸುಜಾತಾ ಭಟ್ ಎಸ್.ಐ.ಟಿ ಅಧಿಕಾರಿಗಳು ಕರೆದಾಗ ಬರುವಂತೆ ಸೂಚನೆ ನೀಡಿ ವಾಪಸ್ ಬೆಂಗಳೂರು ಮನೆಗೆ ಕಳುಹಿಸಿದ್ದಾರೆ.
ಸುಜಾತಾಗೆ ಬುರುಡೆ ಟೀಂ ಸಂಪರ್ಕ ಹೇಗೆ?:
ವಿಚಾರಣೆ ವೇಳೆ ಸುಜಾತ ಭಟ್, ಯೂಟ್ಯೂಬರ್ ಒಬ್ಬನ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಯುನೈಟೆಡ್ ಮೀಡಿಯಾ ಹೆಸರಿನ ಯೂಟ್ಯೂಬರ್ ಅಭಿಷೇಕ್ ಎಂಬುವರ ಹೆಸರನ್ನು ಸುಜಾತ ಭಟ್ ಹೇಳಿದ್ದಾರೆ ಎನ್ನಲಾಗಿದೆ. ನಾಲ್ಕೈದು ತಿಂಗಳ ಹಿಂದೆಯೇ ಅಭಿಷೇಕ್, ಸುಜಾತಾ ಭಟ್‌ರ ಸಂದರ್ಶನ ಮಾಡಿದ್ದರು. ಇದಾದ ಬಳಿಕ ಸುಜಾತ ಭಟ್ ಪ್ರಕರಣ ಸಾರ್ವಜನಿಕವಾಗಿ ಚರ್ಚೆಗೆ ಬಂದಿತ್ತು.
ಆಗಲೇ ಬುರುಡೆ ಷಡ್ಯಂತ್ರದ ಪ್ಲ್ಯಾನ್‌ನಲ್ಲಿದ್ದ ಬುರುಡೆ ಗ್ಯಾಂಗ್ ಸುಜಾತಾ ಭಟ್‌ರನ್ನು ಸಂಪರ್ಕ ಮಾಡಿತ್ತು. ಹೋರಾಟಗಾರ ಜಯಂತ್ ಮೂಲಕ ಅಭಿಷೇಕ್ ಸಹಕಾರದಲ್ಲಿ ಸುಜಾತ ಭಟ್ ಅವರನ್ನು ಸಂಪರ್ಕಿಸಲಾಗಿತ್ತು. ಅಲ್ಲಿಂದ ಸುಜಾತ ಭಟ್ ಅವರನ್ನು ಬುರುಡೆ ಸ್ಟೋರಿಗೆ ಬುರುಡೆ ಗ್ಯಾಂಗ್ ಬಳಸಿಕೊಂಡಿತ್ತು.
ನನ್ನ ಮಗಳ ಅಸ್ಥಿಪಂಜರ ಸಿಕ್ಕರೆ ಕೊಡಿ ಎಂದು ಸುಜಾತ ಭಟ್‌ರಿಂದ ಎಸ್ಐಟಿಗೆ ಬುರುಡೆ ಗ್ಯಾಂಗ್ ದೂರು ಕೊಡಿಸಿತ್ತು. ಯೂಟ್ಯೂಬ್‌ನಲ್ಲೂ ಸುದ್ದಿ ಹಬ್ಬಿಸಿ, ಲಕ್ಷಾಂತರ ವೀವ್ಸ್‌ನ್ನು ಅಭಿಷೇಕ್ ಪಡೆದಿರುವ ಬಗ್ಗೆ ಎಸ್‌ಐಟಿ ಮಾಹಿತಿ ಕಲೆ ಹಾಕಿದೆ.
ಎಸ್ಐಟಿ ಕಚೇರಿಗೆ ಚಿನ್ನಯ್ಯ ಸಹೋದರನ ಮಗ ಭೇಟಿ:
ಚಿನ್ನಯ್ಯ ಸಹೋದರ ತಾನಸಿ ಪುತ್ರ ಪುರುಷೋತ್ತಮ ಕೂಡ ಶುಕ್ರವಾರ ಎಸ್‌ಐಟಿ ಕಚೇರಿಗೆ ಆಗಮಿಸಿ, ವಿಚಾರಣೆ ಎದುರಿಸಿದರು. ಚಿನ್ನಯ್ಯ, ಇತ್ತೀಚಿನ ದಿನಗಳಲ್ಲಿ ಪುರುಷೋತ್ತಮ್ ಜೊತೆ ನಿಕಟ ಸಂಪರ್ಕದಲ್ಲಿದ್ದ. ಹೀಗಾಗಿ, ಚಿನ್ನಯ್ಯ ಬಗ್ಗೆ ಎಸ್ಐಟಿ ಮತ್ತಷ್ಟು ಮಾಹಿತಿ ಸಂಗ್ರಹಿಸುವ ಸಲುವಾಗಿ ಪುರುಷೋತ್ತಮ್ ಅವರ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಸಮೀರ್ ಗೈರು:
ಎಐ ಟೂಲ್ ಬಳಸಿ ಧರ್ಮಸ್ಥಳ ಕ್ಷೇತ್ರಕ್ಕೆ ಅವಮಾನ ಎಸಗಿದ ಆರೋಪದಲ್ಲಿ ಎರಡು ದಿನಗಳ ಕಾಲ ವಿಚಾರಣೆ ಎದುರಿಸಿದ್ದ ಯೂಟ್ಯೂಬರ್ ಸಮೀರ್, ನೋಟಿಸ್ ನೀಡಿದರೂ, ಅನಾರೋಗ್ಯದ ನೆಪವೊಡ್ಡಿ ಮೂರನೇ ದಿನದ ವಿಚಾರಣೆಗೆ ಗೈರಾಗಿದ್ದರು. ಎಐ ವಿಡಿಯೋಗೆ ಮಾಡಲು ಬಳಸಿದ ಸಿಸ್ಟಮ್, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ತರಲು ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಅನಾರೋಗ್ಯದಿಂದ ಅವರು ಗೈರಾಗಿದ್ದರು.
ಲಾಯರ್ ಜಗದೀಶ್ ಹಾಜರು:
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸ್ ಗೆ ಸಂಬಂಧಿಸಿ ವಿಚಾರಣೆಗೆ ಲಾಯರ್ ಜಗದೀಶ್ ಕೂಡ ಹಾಜರಾಗಿದ್ದರು. ಬೆಳ್ತಂಗಡಿ ನಿವಾಸಿ ಪ್ರಭಾಕರ ಗೌಡ ಎಂಬುವರು ಆ.13ರಂದು ನೀಡಿದ ದೂರಿನಡಿ ಎಫ್ಐಆರ್ ದಾಖಲಾಗಿತ್ತು. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಉತ್ಖನನ ಬಗ್ಗೆ ತಮ್ಮ ಫೇಸ್ ಬುಕ್ ಖಾತೆ ಮೂಲಕ ಪ್ರಚೋದನಕಾರಿ ಹೇಳಿಕೆ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಿಮರೋಡಿ ವಿಚಾರಣೆ
ತಮ್ಮ ಬಂಧನದ ವೇಳೆ ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಶುಕ್ರವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಒಂದೂವರೆ ಗಂಟೆ ಅವರ ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ತಿಮರೋಡಿ ಅವರು ಗಿರೀಶ್ ಮಟ್ಟಣ್ಣವರ್ ಜೊತೆಗೆ ನೇರವಾಗಿ ಎಸ್‌ಐಟಿ ಕಚೇರಿಗೆ ತೆರಳಿ, ಕೆಲವೊಂದು ದಾಖಲೆಗಳನ್ನು ಸಲ್ಲಿಸಿದ್ದಾರೆ.