ಕನ್ನಡಿಗ ಬೈಕ್‌ ಸವಾರ ಮೇಲೆ ಹಲ್ಲೆ: ನಾಳೆ ವಿಂಗ್ ಕಮಾಂಡರ್ ವಿಚಾರಣೆ

ಸಾರಾಂಶ

ಕನ್ನಡಿಗ ಬೈಕ್ ಸವಾರ ವಿಕಾಸ್ ಕುಮಾರ್ ಮೇಲಿನ ಭೀಕರ ದೌರ್ಜನ್ಯ ಪ್ರಕರಣ ಸಂಬಂಧ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್‌ ಶುಕ್ರವಾರ ಬೈಯ್ಯಪ್ಪನಹಳ್ಳಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು : ಕನ್ನಡಿಗ ಬೈಕ್ ಸವಾರ ವಿಕಾಸ್ ಕುಮಾರ್ ಮೇಲಿನ ಭೀಕರ ದೌರ್ಜನ್ಯ ಪ್ರಕರಣ ಸಂಬಂಧ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್‌ ಶುಕ್ರವಾರ ಬೈಯ್ಯಪ್ಪನಹಳ್ಳಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ತಮ್ಮ ತಂದೆ ಶಸ್ತ್ರಚಿಕಿತ್ಸೆ ಸಲುವಾಗಿ ಕೋಲ್ಕತಾಗೆ ಶಿಲಾದಿತ್ಯ ತೆರಳಿದ್ದಾರೆ. ಈಗಾಗಲೇ ಪ್ರಕರಣದ ಸಂಬಂಧ ಅವರನ್ನು ಸಂಪರ್ಕಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ತಾವು ಪೊಲೀಸರ ತನಿಖೆಗೆ ಸಹಕರಿಸುವುದಾಗಿ ಶಿಲಾದಿತ್ಯ ಹೇಳಿದ್ದಾರೆ. ಅಲ್ಲದೆ ಶುಕ್ರವಾರ ವಿಚಾರಣೆಗೆ ಬರುವುದಾಗಿ ಅವರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಚಾರಣೆಯಲ್ಲಿ ಶಿಲಾದಿತ್ಯ ಹೇಳಿಕೆ ಬಳಿಕ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಘಟನೆ ಸಂಬಂಧ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾ ಹಾಗೂ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೋಗಳನ್ನು ಸಲ್ಲಿಸುವಂತೆಯೂ ಶಿಲಾದಿತ್ಯ ಪತ್ನಿ ಮಧುಮಿತಾಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ಗೆ 2 ದಿನಗಳಲ್ಲಿ ಪ್ರತಿಕ್ರಿಯಿಸುವುದಾಗಿ ಅವರು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಹಿಂದಿಕ್ಕುವ ವಿಚಾರವಾಗಿ ಹಳೇ ಮದ್ರಾಸ್ ರಸ್ತೆಯಲ್ಲಿ ಬೈಕ್ ಸವಾರ ವಿಕಾಸ್ ಮೇಲೆ ಸಿಟ್ಟಿಗೆದ್ದು ವಿಂಗ್ ಕಮಾಂಡರ್‌ ಶಿಲಾದಿತ್ಯ ಮನಬಂದಂತೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದರು. ಘಟನೆ ಸಂಬಂಧ ಅವರ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಲ್ಲೆ ನಡೆಸಿದ ವಿಂಗ್ ಕಮಾಂಡರ್ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದರು.

ಸಂತ್ರಸ್ತನ ಮತ್ತೆ ವಿಚಾರಣೆ:  ಹಲ್ಲೆಗೊಳಗಾಗಿದ್ದ ವಿಕಾಸ್ ಕುಮಾರ್‌ನನ್ನು ಮತ್ತೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಲು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ನಿರ್ಧರಿಸಿದ್ದಾರೆ. ಅದರಂತೆ ಗುರುವಾರ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ತನ್ನ ಮೇಲಿನ ಹಲ್ಲೆಯಿಂದ ಮಾನಸಿಕವಾಗಿ ಜರ್ಜರಿತನಾಗಿದ್ದ ವಿಕಾಸ್‌, ತನಗೆ ಎರಡು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದ. ಹೀಗಾಗಿ ಪ್ರಕರಣದಲ್ಲಿ ಬಂಧಿಸಿದ ಬಳಿಕ ಠಾಣಾ ಜಾಮೀನು ಮಂಜೂರು ಮಾಡಿ ಆತನನ್ನು ಪೊಲೀಸರು ಬಿಡುಗಡೆಗೊಳಿಸಿದ್ದರು.

ವಿಂಗ್ ಕಮಾಂಡರ್ ಬಂಧನಕ್ಕೆ ಅಭಿಯಾನ

ಕನ್ನಡಿಗ ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಶಿಲಾದಿತ್ಯ ಬಂಧನಕ್ಕೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಪರ ಸಂಘಟನೆಗಳು ಅಭಿಯಾನ ಆರಂಭಿಸಿವೆ.

‘ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಹಾಡಹಗಲೇ ಐಎಎಫ್‌ ಅಧಿಕಾರಿ ಶಿಲಾದಿತ್ಯ ಬೋಸ್‌ರಿಂದ ಹಲ್ಲೆಯಾಗಿ ಇದೀಗ ಸರಿಯಾಗಿ 60 ಗಂಟೆಗಳಾಗಿವೆ. ಇಲ್ಲಿಯವರೆಗೂ ಅವರ ಬಂಧನವಾಗಿಲ್ಲ. ಅವರ ಬಂಧನ ಯಾವಾಗ?'' ಎಂದು ‘ಎಕ್ಸ್‌’ ಜಾಲ ತಾಣದಲ್ಲಿ ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ. ಇದಕ್ಕೆ #ArrestShiladityaBose ಎಂಬ ಹ್ಯಾಶ್ ಟ್ಯಾಗ್ ಅನ್ನು ಸಹ ಸಂಘಟನೆ ಬಳಸಿದೆ.

Share this article