ಬಮುಲ್‌ ಚುನಾವಣೆ: 9 ನಿರ್ದೇಶಕರ ಪೈಕಿ 7 ಸ್ಥಾನದಲ್ಲಿ ಕಾಂಗ್ರೆಸ್‌ಗೆ ಗೆಲುವು

Published : May 26, 2025, 06:41 AM IST
Bamul

ಸಾರಾಂಶ

ತೀವ್ರ ಮಾತಿನ ಚಕಮಕಿ ನಡುವೆ ಬೆಂಗಳೂರು ಹಾಲು ಒಕ್ಕೂಟ ನಿಯಮಿತದ (ಬಮುಲ್‌) ಒಂಬತ್ತು ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಏಳು ಸ್ಥಾನ ಗಳಿಸಿ ಪಾರಮ್ಯ ಸಾಧಿಸಿದ್ದಾರೆ.

 ಬೆಂಗಳೂರು : ತೀವ್ರ ಮಾತಿನ ಚಕಮಕಿ ನಡುವೆ ಬೆಂಗಳೂರು ಹಾಲು ಒಕ್ಕೂಟ ನಿಯಮಿತದ (ಬಮುಲ್‌) ಒಂಬತ್ತು ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಏಳು ಸ್ಥಾನ ಗಳಿಸಿ ಪಾರಮ್ಯ ಸಾಧಿಸಿದ್ದಾರೆ.

ಹೊಸೂರು ರಸ್ತೆಯ ಡೈರಿ ವೃತ್ತದಲ್ಲಿರುವ ಐಟಿಐ ಕಾಲೇಜಿನಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೆಲಕಾಲ ವಾಗ್ವಾದ, ಮಾತಿನ ಚಕಮಕಿ ನಡೆದಿದೆ. ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವಾಗಿರುವ ಬಮುಲ್‌ನ 14 ನಿರ್ದೇಶಕ ಸ್ಥಾನದಲ್ಲಿ ಈಗಾಗಲೇ ಕಾಂಗ್ರೆಸ್‌ ಅವಿರೋಧವಾಗಿ 3 ಸ್ಥಾನ ಗಳಿಸಿದೆ. ಕನಕಪುರದಿಂದ ಮಾಜಿ ಸಂಸದ ಡಿ.ಕೆ.ಸುರೇಶ್‌, ಕುದೂರಿನಿಂದ ರಾಜಣ್ಣ, ಆನೇಕಲ್‌ನಿಂದ ಆರ್.ಕೆ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ಪೂರ್ವದ ನಿರ್ದೇಶಕ ಸ್ಥಾನಗಳ ಮತ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇನ್ನುಳಿದ 9 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7 ಸ್ಥಾನ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ತಲಾ ಒಂದೊಂದು ಸ್ಥಾನ ಪಡೆದಿವೆ.

ಎಸ್ಟಿಎಸ್‌ ವಿರುದ್ಧ ಆಕ್ರೋಶ:  ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಸೋಮಶೇಖರ್‌ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಆಗ ಸಿಟ್ಟಿಗೆದ್ದ ಕಾಂಗ್ರೆಸ್‌ ಕಾರ್ಯಕರ್ತರು, ಹಾಗಾದರೆ ಸೋಮಶೇಖರ್‌ ರನ್ನು ಬಿಜೆಪಿಯಿಂದ ಉಚ್ಚಾಟಿಸಿ ಎಂದು ಹೇಳಿದ್ದು, ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿ ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು.

ಮತ ಎಣಿಕೆ ಕೇಂದ್ರದ ಬಳಿ ಶಾಸಕ ಇಕ್ಬಾಲ್‌ ಹುಸೇನ್‌ ಜೊತೆಗೆ ಡಿ.ಕೆ.ಸುರೇಶ್‌ ಆಗಮಿಸಿದಾಗಲೂ ರಾಮನಗರದ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ ವಾಗ್ವಾದ ನಡೆಯಿತು. ಈ ನಡುವೆ ವಿಜೇತ ಅಭ್ಯರ್ಥಿಯೊಬ್ಬರ ಜೇಬಿಗೆ ಕಳ್ಳನೊಬ್ಬ ಕತ್ತರಿ ಹಾಕಿ ಮೊಬೈಲ್ ಹಾಗೂ ಪರ್ಸ್ ಕಳ್ಳತನ ನಡೆಸಿದ. ತಕ್ಷಣ ಕಳ್ಳನನ್ನು ಹಿಡಿದ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು.

ಕ್ಷೇತ್ರ- ವಿಜೇತರು- ಬೆಂಬಲಿತ ಪಕ್ಷ

ಚನ್ನಪಟ್ಟಣ ಎಸ್‌.ಲಿಂಗೇಶ್‌ಕುಮಾರ್‌ ಕಾಂಗ್ರೆಸ್‌

ರಾಮನಗರ ಚಲುವಯ್ಯ ಕಾಂಗ್ರೆಸ್‌

ದೇವನಹಳ್ಳಿ ಎಸ್‌.ಪಿ.ಮುನಿರಾಜು ಕಾಂಗ್ರೆಸ್‌

ಹೊಸಕೋಟೆ ಬಿ.ವಿ.ಸತೀಶ್‌ಗೌಡ ಕಾಂಗ್ರೆಸ್‌

ದೊಡ್ಡಬಳ್ಳಾಪುರ ಬಿ.ಸಿ.ಆನಂದಕುಮಾರ ಬಿಜೆಪಿ

ನೆಲಮಂಗಲ ಬೈರೇಗೌಡ ಜೆಡಿಎಸ್‌

ಮಾಗಡಿ ಎಚ್‌.ಎನ್‌.ಅಶೋಕ್‌ ಕಾಂಗ್ರೆಸ್‌

ಬೆಂಗಳೂರು ದಕ್ಷಿಣ ಕೆ.ಎಂ.ಕೃಷ್ಣಯ್ಯ ಕಾಂಗ್ರೆಸ್‌

ಹಾರೋಹಳ್ಳಿ ಎಚ್‌.ಎಸ್‌.ಹರೀಶ್‌ಕುಮಾರ್‌ ಕಾಂಗ್ರೆಸ್‌

ಬಮೂಲ್ ಚುನಾವಣೆ: ಡೈರಿ ಅಧ್ಯಕ್ಷನ ಕಿಡ್ನಾಪ್ ಆರೋಪ 

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ನಿರ್ದೇಶಕರ ಚುನಾವಣೆ ಹಿನ್ನೆಲೆಯಲ್ಲಿ ಡೈರಿ ಅಧ್ಯಕ್ಷನನ್ನು ಅಪಹರಿಸಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಠಾಣೆ ಮುಂದೆ ಹೈಡ್ರಾಮಾ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಲ್ಲಿ ನಡೆದಿದೆ. 

ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮದ ಡೈರಿ ಅಧ್ಯಕ್ಷ ಶಂಕರರಾಜು ಅವರನ್ನು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಮ್ಮೊಂದಿಗೆ ಕರೆದೊಯ್ದಿದ್ದರು. ಬಳಿಕ ಶಂಕರರಾಜು ಅವರ ಪತ್ನಿ ಶಿವಮ್ಮ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದರು. ತಕ್ಷಣ ಶಿವಮ್ಮ ಪೊಲೀಸರಿಗೆ ಕಿಡ್ನಾಪ್‌ ದೂರು ನೀಡಿದ್ದರು. ಪೊಲೀಸರು ಜಗದೀಶ ಚೌಧರಿ ಅವರನ್ನು ಬಂಧಿಸಿದರು. ವಿಷಯ ತಿಳಿದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಠಾಣೆಗೆ ಜಮಾಯಿಸಿ ಮುತ್ತಿಗೆ ಹಾಕುವ ಬೆದರಿಕೆ ಒಡ್ಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ವಿಚಾರಣೆ ಬಳಿಕ ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ