ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ 20 ವರ್ಷಗಳ ಬಳಿಕ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ಆರೋಪಿಗಳು ದೋಷಿ ಎಂದು ನಿರ್ಣಯಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಎಲ್ಲಾ ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು : ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ 20 ವರ್ಷಗಳ ಬಳಿಕ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ಆರೋಪಿಗಳು ದೋಷಿ ಎಂದು ನಿರ್ಣಯಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಎಲ್ಲಾ ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದೇ ವೇಳೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದೆ. ಹೀಗಾಗಿ ಕೃಷ್ಣಯ್ಯ ಶೆಟ್ಟಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಸಿಬಿಐ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದರು. 1ನೇ ಆರೋಪಿ ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಟಿ.ವಿ.ರೆಡ್ಡಿ, 2ನೇ ಆರೋಪಿ ಕೃಷ್ಣಯ್ಯ ಶೆಟ್ಟಿ, 3ನೇ ಆರೋಪಿ ಕೆ.ಮುನಿರಾಜು, 4ನೇ ಆರೋಪಿ ಕೆ.ಶ್ರೀನಿವಾಸ್ ತಪ್ಪಿತಸ್ಥರು ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ. 5ನೇ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿರುವ ನ್ಯಾಯಾಲಯ ಕೃಷ್ಣಯ್ಯ ಶೆಟ್ಟಿಗೆ 5.25 ಲಕ್ಷ ರು., ಎಂ.ಟಿ.ವಿ.ರೆಡ್ಡಿಗೆ 7.75 ಲಕ್ಷ ರು. ಮತ್ತು ಕೆ.ಮುನಿರಾಜು, ಕೆ.ಶ್ರೀನಿವಾಸ್‌ಗೆ ತಲಾ ಎರಡು ಲಕ್ಷ ರು. ದಂಡ ವಿಧಿಸಿ, ಐದು ಲಕ್ಷ ರು. ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ನೀಡಲು ಆದೇಶಿಸಲಾಗಿದೆ.
ಏನಿದು ಪ್ರಕರಣ?: 2003ರಲ್ಲಿ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್ ಮಾಲೀಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಸರ್ಕಾರಿ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದರು. ಬಿಟಿಎಸ್, ಕೆಎಸ್ಆರ್‌ಟಿಸಿ, ಬಿಎಸ್ಎನ್ಎಲ್, ಐಟಿಐ, ಎಚ್ಎಎಲ್, ಬಿಇಎಂಎಲ್, ಎಡಿಇ ಸಂಸ್ಥೆಗಳ 181 ಮಂದಿಯ ನಕಲಿ ದಾಖಲೆ ಸೃಷ್ಟಿಸಿ 7.17 ಕೋಟಿ ರು. ಬ್ಯಾಂಕ್ ಸಾಲ ಪಡೆದಿದ್ದರು. ಆದರೆ, ಸಾಲ ಪಡೆದುಕೊಂಡಿದ್ದ ವ್ಯಕ್ತಿಗಳು ಸರ್ಕಾರಿ ನೌಕರರು ಆಗಿರಲಿಲ್ಲ. ಬೇನಾಮಿ ಹೆಸರಲ್ಲಿ ಸರ್ಕಾರಿ ನೌಕರರ ವೇತನ ರಸೀದಿಯನ್ನು ನಕಲು ಮಾಡಿ ಎಸ್‌ಬಿಐ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು.
ಬ್ಯಾಂಕ್‌ನ ಮುಖ್ಯ ವಿಚಕ್ಷಣೆ ದಳದ ಮುಖ್ಯಸ್ಥ ಆರ್.ಡಿ.ನಾಯ್ಡು ನೀಡಿರುವ ದೂರು ಆಧರಿಸಿ, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ನನ್ನ ತಪ್ಪಿಲ್ಲ ಮತ್ತು ನನ್ನನ್ನು ಕೈ ಬಿಡಬೇಕೆಂದು 2013ರಲ್ಲಿ ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿ ತಿರಸ್ಕೃತಗೊಂಡಿತ್ತು. ಬಳಿಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2023ರಲ್ಲಿ ಹೈಕೋರ್ಟ್ ಸಹ ಕೃಷ್ಣಯ್ಯಶೆಟ್ಟಿ ಮನವಿಯನ್ನು ತಿರಸ್ಕರಿಸಿತ್ತು.
ಸಾಲ ಕೊಡಿಸುವಾಗ ನೌಕರರಲ್ಲದವರನ್ನು ನೌಕರರೆಂದು ಸುಳ್ಳು ವೇತನ ರಸೀದಿ, ಪ್ರಮಾಣಪತ್ರ ಕೊಟ್ಟು ಸಾಲ ಪಡೆಯಲಾಗಿತ್ತು ಎಂಬ ಆರೋಪ ಮಾಡಲಾಗಿತ್ತು. ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇಔಟ್ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್ಪ್ರೈಸಸ್ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಐನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.