ಬೆಂಗಳೂರು ದಕ್ಷಿಣ,ಆನೇಕಲ್ : ನವದೆಹಲಿಯ ಮೃಗಾಲಯ ಪ್ರಾಧಿಕಾರ ಮತ್ತು ಸಂಬಂಧಿತ ಇಲಾಖೆಗಳ ಅನುಮೋದನೆಯ ಮೂಲಕ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಏಷ್ಯನ್ ಆನೆಗಳು ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಹಿಮೇಜಿ-ಸಫಾರಿ ಪಾರ್ಕ್‌ಗೆ ಏರ್ ಲಿಫ್ಟ್ ಮೂಲಕ ಪ್ರಯಾಣ ಬೆಳೆಸಿದವು.
ಬನ್ನೇರುಘಟ್ಟದಿಂದ ಬೆಳಿಗ್ಗೆ 11 ಗಂಟೆಗೆ ಕ್ರಾಲ್ ನಿಂದ ಕ್ರೇನ್ ಸಹಾಯದಿಂದ ಲಾರಿಗಳ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದು ರಾತ್ರಿ 8 ಗಂಟೆಗೆ ಹೊರಡಲಿರುವ ಕತಾರ್ ಏರ್‌ವೇಸ್‌ನ B777-200F ಸರಕು ಸಾಗಣೆ ವಿಮಾನದಲ್ಲಿ ಒಸಾಕಾದ ಕನ್ಸಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸತತ 8 ಗಂಟೆಗಳ ಪ್ರಯಾಣದ ಮೂಲಕ ಬಂದಿಳಿಯಲಿದ್ದು, ಅಲ್ಲಿಂದ ನೇರವಾಗಿ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ಒಟ್ಟಾರೆ 20 ಗಂಟೆಗಳ ಕಾಲ ಪ್ರಯಾಣದ ಮೂಲಕ ತಲುಪಿಸುವ ಗುರಿ ಹೊಂದಲಾಗಿದೆ.
ನಾಲ್ಕು ಆನೆಗಳಾದ ಸುರೇಶ್ (8 ವರ್ಷ, ಗಂಡು), ಗೌರಿ (9 ವರ್ಷ, ಹೆಣ್ಣು), ಶ್ರುತಿ (7 ವರ್ಷ, ಹೆಣ್ಣು) ಮತ್ತು ತುಳಸಿ (5 ವರ್ಷ, ಹೆಣ್ಣು ) ಎಂಬ ಆನೆಗಳ ವಿನಿಮಯದ ಪ್ರತಿಯಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಾಲ್ಕು ಚೀತಾಗಳು, ನಾಲ್ಕು ಜಾಗ್ವಾರ್‌ಗಳು, ನಾಲ್ಕು ಪೂಮಾಗಳು, ಮೂರು ಚಿಂಪಾಂಜಿಗಳು ಮತು ಎಂಟು ಕ್ಯಾಪುಚಿನ್ ಕೋತಿಗಳನ್ನು ಕರೆತರಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ಅಧಿಕಾರಿ ವಿಶಾಲ್ ಸೂರ್ಯ ಸೇನ್ ತಿಳಿಸಿದ್ದಾರೆ.
ಕಳೆದ ಆರು ತಿಂಗಳಿಂದ ಆನೆಗಳ ಸುದೀರ್ಘ ಪ್ರಯಾಣಕ್ಕೆ ಅಗತ್ಯ ತರಬೇತಿ ನೀಡಲಾಗಿದೆ. ಆನೆಗಳ ಆರೋಗ್ಯದ ನಿಗಾವಹಿಸಿ ಸೂಕ್ತ ಪಶು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅಲ್ಲದೆ ಈ ಹಿಂದೆ ಮೈಸೂರು ಮೃಗಾಲಯದಿಂದ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ ಮೂರು ಆನೆಗಳನ್ನು ಕಳುಹಿಸಲಾಗಿತ್ತು, ಜಪಾನ್‌ಗೆ ಆನೆಗಳ ವಿನಿಮಯದ ಎರಡನೇ ಬ್ಯಾಚ್ ಇದಾಗಿದೆ ಎಂದರು.
ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬರು ಜೀವ ಶಾಸ್ತ್ರಜ್ಞೆ ಸೇರಿದಂತೆ ಒಟ್ಟು ಎಂಟು ಮಂದಿ ಆನೆಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಬನ್ನೇರುಘಟ್ಟದ ತಂಡವು ಎರಡು ವಾರಗಳ ಕಾಲ ಹಿಮೇಜಿ ಸೆಂಟ್ರಲ್ ಪಾರ್ಕ್‌ನಲ್ಲಿ ತಂಗಿ ಆನೆಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಆನೆ ಪಾಲಕರಿಗೆ ಮೇ 12 ರಿಂದ ಮೇ 25ರವರೆಗೆ ಸುಮಾರು 20 ದಿನಗಳ ಕಾಲ ತರಬೇತಿ ನೀಡಲಾಗಿದ್ದು ಹಿಂದಿ ಭಾಷೆಗೆ ಹೊಂದಿಕೊಂಡಿದ್ದ ಆನೆಗಳಿಗೆ ಇಂಗ್ಲಿಷ್ ಭಾಷಾ ಸಂವಹನದ ಮೂಲಕ ತರಬೇತಿ ನೀಡಿ ಪಳಗಿಸಲಾಗಿದೆ. ಅಲ್ಲದೇ ಹಂತ ಹಂತವಾಗಿ ವಿನಿಮಯದ ಭಾಗವಾಗಿ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆ ತರಲು ಸಿದ್ಧತೆ ನಡೆಸಲಾಗಿದ್ದು, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಮೊದಲಿಗೆ ಎಂಟು ಕ್ಯಾಪುಚಿನ್ ಕೋತಿಗಳನ್ನು ಕರೆತರಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.