ಚಂಡಮಾರುತಕ್ಕೆ ಬೆಂಗಳೂರು ಥಂಡ, ಥಂಡ! ದಿನವಿಡೀ ಮೋಡ ಮುಸುಕಿನ ವಾತಾವರಣ, ಮೈಕೊರೆವ ಚಳಿ

Published : Dec 02, 2024, 07:00 AM IST
bengaluru foggy

ಸಾರಾಂಶ

ಚಂಡಮಾರುತದ ಪ್ರಭಾವ ಶನಿವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಗೊಂಡಿರುವ ಮಳೆ ಭಾನುವಾರವೂ ಮುಂದುವರೆದಿದ್ದು, ಜಿಟಿ-ಜಿಟಿ ಮಳೆಯೊಂದಿಗೆ ಆಗಾಗ ಬಿರುಸಿನ ಮಳೆಯಾಗಿದೆ.

ಬೆಂಗಳೂರು  : ಚಂಡಮಾರುತದ ಪ್ರಭಾವ ಶನಿವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಗೊಂಡಿರುವ ಮಳೆ ಭಾನುವಾರವೂ ಮುಂದುವರೆದಿದ್ದು, ಜಿಟಿ-ಜಿಟಿ ಮಳೆಯೊಂದಿಗೆ ಆಗಾಗ ಬಿರುಸಿನ ಮಳೆಯಾಗಿದೆ. ಮಳೆ ಹಾಗೂ ಚಳಿಯ ಪರಿಣಾಮ ರಜೆ ದಿನವಾದ ಭಾನುವಾರ ಜನ ಸಂಚಾರ ಬಹಳಷ್ಟು ಕಡಿಮೆಯಾಗಿತ್ತು. ವ್ಯಾಪಾರ-ವಹಿವಾಟು ಕುಂದಿತ್ತು. ಹೋಟೆಲ್‌, ಮಾಲ್‌ಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.

ಭಾನುವಾರ ದಿನವಿಡೀ ಮೋಡ ಮುಸುಕಿನ ವಾತಾವರಣ, ಮೈಕೊರೆವ ಚಳಿ ಸೃಷ್ಟಿಯಾಗಿತ್ತು. ಮಧ್ಯಾಹ್ನದ ನಂತರ ಆಗಾಗ ಸೋನೆ ಮಳೆ ಜೊತೆಗೆ ಬಿರುಸಿನ ಮಳೆ ಸುರಿಯಿತು. ಜಿಟಿ ಜಿಟಿ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಯಿತು. ಹೀಗಾಗಿ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಹೊರಗೆ ಹೋಗಲು ಯೋಚಿಸಿದ್ದವರಿಗೆ ನಿರಾಸೆ ಉಂಟಾಯಿತು.

ಚಳಿ- ಚಳಿ:

ಮಳೆಯಿಂದ ವಾತಾವರಣ ತಂಪಾಗಿರುವ ಜೊತೆಗೆ ಸಣ್ಣ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಕಳೆದ ಮೂರು ದಿನಗಳಿಂದ ಸೂರ್ಯನ ದರ್ಶನವೇ ಆಗಿಲ್ಲ. ಸಾರ್ವಜನಿಕರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗಿದ್ದರು.

ಇಂದು ಭಾರೀ ಮಳೆ?

ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಪೈಕಿ ಸೋಮವಾರ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇದೆ. ಸಾಧಾರಣದಿಂದ ಭಾರೀ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

ಮಾರತ್ತಹಳ್ಳಿಯಲ್ಲಿ 1.2 ಸೆಂ.ಮೀ. ಮಳೆ

ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣ ಹಾಗೂ ಮಾರತ್ತಹಳ್ಳಿಯಲ್ಲಿ ಭಾನುವಾರ 1.2 ಸೆಂಟಿ ಮೀಟರ್‌ ಮಳೆಯಾಗಿದೆ. ಉಳಿದಂತೆ ಬೆಳೇಕಹಳ್ಳಿ ಹಾಗೂ ಗೊಟ್ಟಿಗೆರೆಯಲ್ಲಿ 1.1 ಸೆಂ.ಮೀ, ದೊಡ್ಡಬಿದರಕಲ್ಲು, ವಿದ್ಯಾಪೀಠ, ಅರಕೆರೆ ಹಾಗೂ ಕೋರಮಂಗಲದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ನಗರದಾದ್ಯಂತ 1 ಸೆಂ.ಮೀ. ಕಡಿಮೆ ಮಳೆಯಾದ ವರದಿಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಗರಿಷ್ಠ ಉಷ್ಣಾಂಶ ಇಳಿಕೆ

ನಗರದಲ್ಲಿ ಭಾನುವಾರ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಡಿಸೆಂಬರ್‌ನಲ್ಲಿ ಬೆಂಗಳೂರಿನ ಗರಿಷ್ಠ ವಾಡಿಕೆ ಉಷ್ಣಾಂಶ 26.5 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಆದರೆ ಭಾನುವಾರ 22.4 ಡಿ.ಸೆ. ಗರಿಷ್ಠ ಹಾಗೂ ಕನಿಷ್ಠ 19.5 ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ 22.9 ಡಿ.ಸೆ., ಕನಿಷ್ಠ 19. 2 ಡಿ.ಸೆ. ದಾಖಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ