ಬೆಂಗ್ಳೂರಲ್ಲಿ ರಾಜ್ಯದ ಮೊದಲ ‘ನಗರ ಸುರಂಗ’

Published : Jun 29, 2026, 10:10 AM IST
CM DK Shivakumar today tunnel road poject

ಸಾರಾಂಶ

ನಗರದ ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗಿನ ವಾಹನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು 2.5 ಕಿ.ಮೀ. ಉದ್ದದ ಕಟ್ ಆ್ಯಂಡ್ ಕವರ್ ಟನಲ್ ನಿರ್ಮಿಸಲಾಗುತ್ತಿದ್ದು, ಇದು ಟೋಲ್‌ ಮುಕ್ತವಾಗಿರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ನಗರದ ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗಿನ ವಾಹನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು 2.5 ಕಿ.ಮೀ. ಉದ್ದದ ಕಟ್ ಆ್ಯಂಡ್ ಕವರ್ ಟನಲ್ ನಿರ್ಮಿಸಲಾಗುತ್ತಿದ್ದು, ಇದು ಟೋಲ್‌ ಮುಕ್ತವಾಗಿರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದು ಕರ್ನಾಟಕದ ನಗರವೊಂದರಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸುರಂಗ ರಸ್ತೆಯಾಗಿದೆ.

ಭಾನುವಾರ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ನಿರ್ಮಿಸಲಿರುವ ನಗರದ ಮೊಟ್ಟಮೊದಲ ಸುರಂಗ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದೇ ನಮ್ಮ ಉದ್ದೇಶ. ಸದ್ಯ ಹೆಬ್ಬಾಳ ಭಾಗದ ಸಂಚಾರ ದಟ್ಟಣೆಗೆ ಒಂದಷ್ಟು ಮುಕ್ತಿ ನೀಡಿದ್ದೇವೆ. ಮೇಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಸುಮಾರು ಎರಡೂವರೆ ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಂಡಿದೆ. ₹1,139 ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಿನ 50 ವರ್ಷಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂಕೋರ್ಟ್‌ ನಮ್ಮ ಪರವಾಗಿ ತೀರ್ಪು ನೀಡಿದೆ. ಇದರಿಂದ ನಗರದ ಇನ್ನಷ್ಟು ಭಾಗದ ಜನರಿಗೆ ಕುಡಿಯುವ ನೀರು ಸಿಗುವಂತಾಗಲಿದೆ ಎಂದರು.

ಹೆಬ್ಬಾಳದಿಂದ ರೇಷ್ಮೆ ಸಂಸ್ಥೆವರೆಗೆ 17 ಕಿ.ಮೀ. ಉದ್ದದ ಟನಲ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರ್‍ನಾಲ್ಕು ವರ್ಷದಲ್ಲಿ ಯೋಜನೆ ಮುಗಿಯಲಿದೆ. ಟನಲ್ ರಸ್ತೆಯಲ್ಲಿ ದುಡ್ಡು ಕೊಟ್ಟು ಹೋಗುವವರು ಹೋಗುತ್ತಾರೆ. ಇದರಿಂದ ಜನರ ಸಮಯ ಉಳಿಯುತ್ತದೆ. ಹಿಡಿದ ಕೆಲಸವನ್ನು ಮಾಡಬೇಕು. ಜನರ ಸಮಯ ಉಳಿಸುವುದು ಮುಖ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ, 1.35 ಕೋಟಿ ವಾಹನಗಳಿವೆ. ಇಡೀ ಬೆಂಗಳೂರಿನಲ್ಲಿ ಕಸದ ಸಮಸ್ಯೆಯಿದೆ.‌ ಅದನ್ನು ಬಗೆಹರಿಸುವ ಕೆಲಸವನ್ನು ಮಾಡಿದ್ದೆ. ನಾನು ಮುಖ್ಯಮಂತ್ರಿ ಆದ ತಕ್ಷಣ ವಿರೋಧ ಪಕ್ಷದ ನಾಯಕರು ₹10 ಸಾವಿರ ಕೋಟಿ ಲಂಚ ಹೊಡೆದಿದ್ದೇನೆ ಎಂದು ಆರೋಪ ಮಾಡಿದರು. ಇನ್ನೂ ಟೆಂಡರ್ ಆಗಿಲ್ಲ, ಯಾವುದೂ ತೀರ್ಮಾನ ಆಗಿಲ್ಲ. ಯಂತ್ರೋಪಕರಣಗಳಿಗೆ ₹4-5 ಸಾವಿರ ಕೋಟಿ ಆಗಬಹುದು. ಆದರೆ ₹10 ಸಾವಿರ ಕೋಟಿ ಎಂದು ಟೀಕೆ ಮಾಡಿದರು. ₹10 ಸಾವಿರ ಕೋಟಿ ಇಡಲು 20 ದೊಡ್ಡ ಶೆಡ್‌ಗಳನ್ನು ಬೇಕಾಗಬಹುದೇನೋ ಎಂದು ಲೇವಡಿ ಮಾಡಿದರು.

ಬಿಡಿಎ ಅಧ್ಯಕ್ಷ, ಶಾಸಕ ಎನ್‌.ಎ.ಹ್ಯಾರೀಸ್‌ ಮಾತನಾಡಿ, ಇಂದು ಟನಲ್‌ ರಸ್ತೆಯ ಶಂಕುಸ್ಥಾಪನೆ ಮಾಡಲಾಗುತ್ತಿದೆ. 18 ತಿಂಗಳಲ್ಲಿ 2.3. ಕಿ.ಮೀ. ಉದ್ದದ ಸುರಂಗ ರಸ್ತೆ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ. ಇದರಿಂದ ಏರ್‌ಪೋರ್ಟ್‌ನಿಂದ ನಗರಕ್ಕೆ ಬರುವವರಿಗೆ, ಹೋಗುವವರಿಗೆ ತುಂಬಾ ಅನುಕೂಲವಾಗಲಿದೆ. ಋತ್ವಿಕ್‌-ಅಮ್ರಿಲ್‌ ಜೆವಿ ಎನ್ನುವಂತಹ ಕಂಪನಿಗೆ ಟೆಂಡರ್‌ ನೀಡಲಾಗಿದ್ದು, ಕಾರ್ಯಾದೇಶವನ್ನು ಕೂಡ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ವಿಧಾನ ಪರಿಷತ್ತು ಸದಸ್ಯ ನಾಗರಾಜ್ ಯಾದವ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುರಂಗ ಮಾರ್ಗದ ವಿಶೇಷ:

ಸುರಂಗದ ಉದ್ದ ಸುಮಾರು 2.228 ಕಿ.ಮೀ

ವಿನ್ಯಾಸ 6 ಲೇನ್‌ ದ್ವಿಮುಖ (3+3 ಲೇನ್‌)

ಲೇನ್‌ ಅಗಲ ಪ್ರತಿ ಲೇನ್‌ಗೆ 3.5 ಮೀಟರ್‌

ರಸ್ತೆ ಅಗಲ 3 ಲೇನ್‌ಗಳಿಗೆ 10.5 ಮೀಟರ್‌

ನಿರ್ಮಾಣ ವಿಧಾನ ಕಟ್‌ ಆ್ಯಂಡ್‌ ಕವರ್‌ ಸುರಂಗ, ಓಪನ್‌ ಕಟ್‌ ರ್‍ಯಾಂಪ್‌ಗಳು

ಟೆಂಡರ್‌ ನಿಗದಿತ ಮೊತ್ತ ₹1,086 ಕೋಟಿ

ಉಲ್ಲೇಖಿತ ಬಿಡ್‌ಮೊತ್ತ ₹1,139.66 ಕೋಟಿ

ಬಿಡ್‌ದಾರ ಋತ್ವಿಕ್‌-ಅಮ್ರಿಲ್‌ ಜೆವಿ

ನಿರ್ಮಾಣ ಅವಧಿ 18 ತಿಂಗಳು 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

12 ತಾಸಿನಲ್ಲಿ 15 ಲಕ್ಷ ಸಸಿ ನೆಟ್ಟು ಬಿಡಿಎ ಗಿನ್ನೆಸ್‌ ದಾಖಲೆ ನಿರ್ಮಾಣ
ಅಮಲಿನ ಅಂಶ ಪತ್ತೆ ಆದ್ರೆ ಪಾನ್‌ ಮಸಾಲ, ಗುಟ್ಕಾ ನಿಷೇಧ: ಡಿಕೆ