ನೆರೆ ರಾಜ್ಯದಲ್ಲಿ ಹಕ್ಕಿ ಜ್ವರ, ರಾಜ್ಯದಲ್ಲೂ ಆತಂಕ - ಆಂಧ್ರ, ಮಹಾರಾಷ್ಟ್ರದಲ್ಲಿ ಉಲ್ಬಣ

ಸಾರಾಂಶ

ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಪ್ರಕರಣಗಳು ಹೆಚ್ಚಾಗಿದ್ದು, ಸಾವಿರಾರು ಹಕ್ಕಿಗಳು ಹಾಗೂ ಕೋಳಿಗಳ ಸಾವು ಸಂಭವಿಸಿದೆ. ನೆರೆ ರಾಜ್ಯಗಳಲ್ಲಿನ ಸೋಂಕಿನಿಂದಾಗಿ ರಾಜ್ಯದಲ್ಲೂ ಹಕ್ಕಿಜ್ವರದ ಆತಂಕ ಶುರುವಾಗಿದೆ.

 ಬೆಂಗಳೂರು : ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಪ್ರಕರಣಗಳು ಹೆಚ್ಚಾಗಿದ್ದು, ಸಾವಿರಾರು ಹಕ್ಕಿಗಳು ಹಾಗೂ ಕೋಳಿಗಳ ಸಾವು ಸಂಭವಿಸಿದೆ. ನೆರೆ ರಾಜ್ಯಗಳಲ್ಲಿನ ಸೋಂಕಿನಿಂದಾಗಿ ರಾಜ್ಯದಲ್ಲೂ ಹಕ್ಕಿಜ್ವರದ ಆತಂಕ ಶುರುವಾಗಿದೆ.

ಈಗಾಗಲೇ ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿನ ವಿವಿಧ ತಾಲೂಕುಗಳ ಗಡಿಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ನೆರೆ ರಾಜ್ಯದಿಂದ ಕೋಳಿ, ಮೊಟ್ಟೆ, ಮಾಂಸ ಹಾಗೂ ಕೋಳಿಗೊಬ್ಬರ ಸಾಗಣೆಯನ್ನು ನಿಷೇಧಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಬಗ್ಗೆ ಅಲರ್ಟ್‌ ಘೋಷಿಸಲಾಗಿದೆ.

ಇನ್ನು ರಾಜ್ಯ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಹಕ್ಕಿ ಜ್ವರ ವರದಿಯಾದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.

ಏನಿದು ಹಕ್ಕಿಜ್ವರ? ಲಕ್ಷಣಗಳೇನು?:

ರಾಜ್ಯದಲ್ಲಿ ಕೆಲ ವರ್ಷಗಳ ಹಿಂದೆ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿ ತೀವ್ರ ಆತಂಕ ಉಂಟು ಮಾಡಿತ್ತು. ಇದೀಗ ಮತ್ತೆ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗುವ ಆತಂಕ ಶುರುವಾಗಿದೆ.ಇದು ಇನ್‌ಫ್ಲ್ಯುಯೆಂಜಾ ಮಾದರಿಯ ಟೈಪ್‌-ಎ ವರ್ಗದ ವೈರಸ್‌ನಿಂದ (ಎಚ್‌5ಎನ್‌1) ಹರಡುವ ಸೋಂಕಾಗಿದ್ದು, ವೇಗವಾಗಿ ಹರಡುತ್ತದೆ.

ಈ ಸೋಂಕು ಉಂಟಾದರೆ ಹೆಚ್ಚು ಜ್ವರ, ಕೆಮ್ಮು, ತಲೆನೋವು, ಗಂಟಲು ನೋವು, ಬೇಧಿ, ಉಸಿರಾಟ ತೊಂದರೆ, ಮೈಕೈ ನೋವು ಉಂಟಾಗಬಹುದು. ಸಾಮಾನ್ಯವಾಗಿ ಸೋಂಕು ಉಂಟಾದ ಎರಡು ದಿನದಲ್ಲಿ ಜ್ವರದ ಸಹಿತ ಲಕ್ಷಣಗಳು ಗೋಚರಿಸುತ್ತವೆ. ಸಾಮಾನ್ಯ ಚಿಕಿತ್ಸೆಯಿಂದಲೇ ವಾಸಿಯಾಗುತ್ತದೆಯಾದರೂ ಕೆಲವರಿಗೆ ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಯೂ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಚಿಕಿತ್ಸೆ ಹೇಗೆ?

ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಜ್ವರ 2-3 ದಿನವಾದರೂ ಕಡಿಮೆ ಆಗದಿದ್ದರೆ ಹಕ್ಕಿಜ್ವರದ ಲಕ್ಷಣ ಎಂದು ಭಾವಿಸಿ ಚಿಕಿತ್ಸೆ ಪಡೆಯಬೇಕು. ರೋಗ ಪತ್ತೆಗೆ ಸ್ವಾಬ್‌ ಮಾದರಿ ಪರೀಕ್ಷೆ ಮಾಡಿಸಬೇಕು. ವೈದ್ಯರ ಸಲಹೆಯಂತೆ ರೋಗ ಲಕ್ಷಣಗಳಿಗೆ ಅಗತ್ಯ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು.

ಭಯಬೇಡ ಎಚ್ಚರ ಇರಲಿ:

ಆರೋಗ್ಯ ಇಲಾಖೆಯ ಸಂಯೋಜಿತ ಕಾಯಿಲೆಗಳ ನಿಗಾ ಕಾರ್ಯಕ್ರಮದ ಯೋಜನಾ ನಿರ್ದೇಶಕ ಡಾ.ಅನ್ಸರ್‌ ಅಹಮದ್‌ ಮಾತನಾಡಿ, ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿಲ್ಲ. ಇನ್ನು ಹಕ್ಕಿಜ್ವರದ ಬಗ್ಗೆ ಯಾವುದೇ ಆತಂಕ ಬೇಡ ಆದರೆ ಎಚ್ಚರಿಕೆ ಇರಬೇಕು ಎಂದು ಹೇಳಿದ್ದಾರೆ.

ಹಕ್ಕಿಜ್ವರವು ಹಕ್ಕಿಯ ತ್ಯಾಜ್ಯದಲ್ಲಿನ ವೈರಾಣುವಿನಿಂದ ಹರಡಬಹುದು. ಸೋಂಕು ಪೀಡಿತ ಹಕ್ಕಿಯ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿಂದ ದ್ರವಿಸುವ ದ್ರವದ ಮೂಲಕವೂ ಬರಬಹುದು.

ಇದು ಹೆಚ್ಚಾಗಿ ಹಕ್ಕಿಯಿಂದ ಹಕ್ಕಿಗೆ ಹರಡುತ್ತದೆ. ಕೋಳಿ ಫಾರಂನಲ್ಲಿ ಕೆಲಸ ಮಾಡುವವರಿಗೆ, ಹಕ್ಕಿ ತ್ಯಾಜ್ಯ ಸೇರಿದ, ಹಕ್ಕಿಗಳು ಈಜಾಡುವ ಕೆರೆ, ನದಿ, ಈಜುಕೊಳಗಳಿಂದಲೂ ಬರಬಹುದು. ಮೃತ ಪಕ್ಷಿಗಳ ವಿಲೇವಾರಿ ವೇಳೆ ಕೈಗವಸು, ಮಾಸ್ಕ್‌, ಕನ್ನಡಕ ಧರಿಸಬೇಕು. ಕೈಗಳನ್ನು ಸ್ವಚ್ಛಗೊಳಿಸಬೇಕು. ಪಕ್ಷಿಯ ಹಿಕ್ಕೆ ಮತ್ತು ಮಣ್ಣಿನಲ್ಲಿ ಈ ವೈರಸ್‌ ಸಕ್ರಿಯವಾಗಿರುತ್ತದೆ. ಹೀಗಾಗಿ ಹಿಕ್ಕೆ ವಿಲೇವಾರಿ ಮಾಡುವಾಗ ಎಚ್ಚರಿಕೆ ಅಗತ್ಯ ಎಂದು ಅವರು ಸಲಹೆ ನೀಡಿದರು.

ಕೋಳಿ ಮಾಂಸ ತಿನ್ನುವುದರಿಂದ ಹಕ್ಕಿಜ್ವರ ಬರಲ್ಲ:

ಕೋಳಿ ಮಾಂಸವನ್ನು ಬೇಯಿಸಿ ತಿಂದರೆ ಹಕ್ಕಿಜ್ವರ ಬರುವುದಿಲ್ಲ. ಕೋಳಿ ಮಾಂಸ ಅಥವಾ ಮೊಟ್ಟೆ ತಿಂದರೆ ಹಕ್ಕಿಜ್ವರ ಬರುತ್ತದೆ ಎಂಬುದು ಜನರ ತಪ್ಪುಕಲ್ಪನೆ. ಕೋಳಿಯನ್ನು ಬೇಯಿಸುವಾಗ ಆ ತಾಪಮಾನದಲ್ಲಿ ರೋಗಾಣು ಬದುಕಿರಲು ಸಾಧ್ಯವಿಲ್ಲ. ಹೀಗಾಗಿ ಮಾಂಸ, ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು ಎಂದು ಡಾ। ಅನ್ಸರ್‌ ಅಹಮದ್‌ ಹೇಳಿದ್ದಾರೆ.

Share this article