ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ ಎನ್‌ಐಗೆ ವಹಿಸಿ: ಗವರ್ನರ್‌ಗೆ ಬಿಜೆಪಿ ಮನವಿ

Published : May 10, 2025, 10:30 AM IST
Suhas Shetty

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

 ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಮುಖಂಡರು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು. ಈ ವೇಳೆ ಹತ್ಯೆಗೊಳಗಾದ ಸುಹಾಸ್ ಶೆಟ್ಟಿಯ ಪಾಲಕರೂ ಆಗಮಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ. ಪಿಎಫ್ಐ ನಂಟು ಕೂಡ ಕಾಣುತ್ತಿದೆ ಎಂದು ಆರೋಪಿಸಿದರು.

ಸುಹಾಸ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮಂಗಳೂರು ಚಲೋ ಮಾಡಲು ತೀರ್ಮಾನ ಮಾಡಿದ್ದೆವು. ‘ಆಪರೇಷನ್ ಸಿಂಧೂರ್’ ಪ್ರಾರಂಭವಾದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ದೇಶದ ಜೊತೆ ನಿಲ್ಲಬೇಕೆಂದು ಹಾಗೇ ಇದ್ದೆವು. ಆದರೆ, ಸುಹಾಸ್ ಹತ್ಯೆ ಆದ ನಂತರದಲ್ಲಿ ನಡೆಯುತ್ತಿರುವ ತನಿಖೆಯು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಟೀಕಿಸಿದರು.

ಪ್ರಕರಣದಲ್ಲಿ ಅನೇಕ ಕಾರುಗಳನ್ನು ಬಳಸಿದ್ದರೂ ಒಂದೆರಡು ಕಾರನ್ನಷ್ಟೇ ವಶಕ್ಕೆ ಪಡೆದಿದ್ದಾರೆ. ಕೇವಲ 10 ಜನರನ್ನಷ್ಟೇ ಬಂಧಿಸಿದ್ದಾರೆ. ಇನ್ನೂ 15- 20 ಜನರು ಇದರ ಹಿಂದಿರುವ ಮಾಹಿತಿ ಸಿಗುತ್ತಿದೆ. ಕೊಲೆಗಾರರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದ ಮಹಿಳೆಯರನ್ನು ಬಂಧಿಸಿಲ್ಲ; ಹೊರದೇಶದಿಂದಲೂ ಹಣ ಬಂದ ಮಾಹಿತಿ ಸಿಗುತ್ತಿದೆ ಎಂದು ಹೇಳಿದರು.

ಫಾಝಿಲ್ ಅವರ ಕುಟುಂಬದವರು ಇದರಲ್ಲಿ ಇಲ್ಲ ಎಂದು ಸ್ಪೀಕರ್ ಅವರ ಹೇಳಿಕೆ ಪರೋಕ್ಷವಾಗಿ ರಕ್ಷಣೆ ಕೊಡುವಂತಿದೆ. ಗೃಹ ಸಚಿವ ಪರಮೇಶ್ವರ್ ಅವರು, ತನಿಖೆ ಪ್ರಾರಂಭಕ್ಕೂ ಮೊದಲು ಎನ್ಐಎಗೆ ಕೊಡಲು ಸಾಧ್ಯ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಂದ ಅಲ್ಲಿನ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತನಿಖೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಆರ್.ಅಶೋಕ್ ಮಾತನಾಡಿ, ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪಾರಿ ನೀಡಿರುವ ಪ್ರಕರಣ. ಮುಸ್ಲಿಂ ಹುಡುಗನ ಕೊಲೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಕಾಂಗ್ರೆಸ್‌ 25 ಲಕ್ಷ ರೂ. ಪರಿಹಾರ ನೀಡಿದ್ದು, ಆ ಹಣವನ್ನು ಬಳಸಿಯೇ ಸುಪಾರಿ ನೀಡಲಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಇಂತಹವರ ವಿಚಾರದಲ್ಲಿ ಮೃದು ಧೋರಣೆ ತಾಳಿದೆ. ಈ ಪ್ರಕರಣದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ಪಾಕಿಸ್ತಾನ ಜಿಂದಾಬಾದ್‌ ಘೋಷಣೆಗೆ, ಭಯೋತ್ಪಾದನೆ ಚಟುವಟಿಕೆಗೆ ಪ್ರೇರಣೆ ಕೊಡುವವರ ಸಂಪರ್ಕ ಇವರಿಗಿದೆ. ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವವರಿಗೆ ಆಪರೇಶನ್‌ ಸಿಂಧೂರದಂತೆಯೇ ಶಾಸ್ತಿ ಆಗಬೇಕಿದೆ. ಇದಕ್ಕೆ ಅಂತ್ಯ ಕಾಣಿಸಬೇಕಿದೆ. ಇದಕ್ಕಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ