ಮಯೂರ್ ಹೆಗಡೆ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲಿರುವ ನಮ್ಮ ಮೆಟ್ರೋ ನೀಲಿ ಮಾರ್ಗವನ್ನು (58 ಕಿಮೀ) ಮೂರು ಹಂತಗಳಲ್ಲಿ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಮುಂದಾಗಿದ್ದು, ಸಂಪೂರ್ಣ ಮಾರ್ಗ 2027ಕ್ಕೆ ಮುಗಿಯಲಿದೆ.
ಔಟರ್ ರಿಂಗ್ ರೋಡ್ ರಸ್ತೆ ಅಂದರೆ ಕೆ.ಆರ್.ಪುರ - ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಬರೋಬ್ಬರಿ 500ಕ್ಕೂ ಹೆಚ್ಚು ಐಟಿ ಕಂಪನಿಗಳಿದ್ದು, ಇಲ್ಲಿಯೇ ಸುಮಾರು 9.5 ಲಕ್ಷ ಉದ್ಯೋಗಿಗಳಿದ್ದಾರೆ. ನೀಲಿ ಮಾರ್ಗ ನಿರ್ಮಾಣದಿಂದ ಇಲ್ಲಿನ ಉದ್ಯೋಗಿಗಳಿಗೆ, ಕಂಪನಿಗಳಿಗೆ ಸಾಕಷ್ಟು ನೆರವಾಗುವ ಜತೆಗೆ ಈ ಭಾಗದ ಟ್ರಾಫಿಕ್ ದಟ್ಟಣೆ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ.
ಮೂರು ಹಂತ:
2021ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಳೆದ ವರ್ಷವೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇದೀಗ ಡೆಡ್‌ಲೈನ್‌ನ್ನು ಪರಿಷ್ಕರಿಸಿ ಮೂರು ಹಂತದಲ್ಲಿ ಮುಗಿಸಲು ತೀರ್ಮಾನಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್. ಪುರ ಮಾರ್ಗವನ್ನು 2026ರ ಸೆಪ್ಟೆಂಬರ್, ಹೆಬ್ಬಾಳದಿಂದ ಏರ್‌ಪೋರ್ಟ್‌ವರೆಗೆ 2027ರ ಜೂನ್ ಹಾಗೂ ಕೆ.ಆರ್.ಪುರದಿಂದ ಹೆಬ್ಬಾಳದವರೆಗೆ 2027ರ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲು ಹಾಗೂ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಸಂಪೂರ್ಣ ನೀಲಿ ಮಾರ್ಗವನ್ನು ಒಂದೇ ಹಂತದಲ್ಲಿ ತೆರೆಯಲು ಮುಂದಾದರೆ ಮೂರು ವರ್ಷ ತಗುಲಬಹುದು (2027-28). ಹೀಗಾಗಿ ಬಿಎಂಆರ್‌ಸಿಎಲ್ ಈ ಮಾರ್ಗವನ್ನು ಮೂರು ಹಂತದಲ್ಲಿ ತೆರೆಯಲು ಯೋಚಿಸುತ್ತಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ವಿಳಂಬ ಯಾಕಾಯ್ತು?
ಈ ಮಾರ್ಗದಲ್ಲಿ ಮರಗಳನ್ನು ಕಡಿಯುವ, ಸ್ಥಳಾಂತರ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ರಸ್ತೆ ಮಾರ್ಗದ ಸ್ಥಳ ಮೆಟ್ರೋಗೆ ಹೆಚ್ಚು ಬಳಕೆ ಆಗದಂತೆ ಮಾಡಲು ಪಿಲ್ಲರ್‌ಗಳ ಮರುವಿನ್ಯಾಸ, ಗೇಲ್ ಗ್ಯಾಸ್ ಪೈಪ್‌ಲೈನ್‌ಗಳ ಸ್ಥಳಾಂತರ, ಹೊರಮಾವು ಮತ್ತು ಎಚ್‌ಬಿಆರ್ ಲೇಔಟ್ ನಡುವೆ ವಿದ್ಯುತ್ ಓವರ್‌ಹೆಡ್ ಹೈಟೆನ್ಷನ್ ಲೈನನ್ನು ಭೂಗತವಾಗಿ ಕೊಂಡೊಯ್ಯಲು ಸಮಯ ತಗುಲಿತು. ಹೀಗಾಗಿ ಒಟ್ಟಾರೆ ನೀಲಿ ಮಾರ್ಗದ ಕಾಮಗಾರಿ ವಿಳಂಬವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲ ನಿಗಮದ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಎಂಬೆಸ್ಸಿ ಕಂಪನಿ 2020ರಲ್ಲಿ ಬಾಗಲೂರು ಕ್ರಾಸ್ ಮತ್ತು ಟ್ರಂಪೆಟ್ ಜಂಕ್ಷನ್ ನಡುವೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತ್ತು. ಅದರೆ, ಮುಂದುವರಿದು ಕಂಪನಿ ಹಣ ನೀಡದ ಕಾರಣ ಈ ನಿಲ್ದಾಣ ನಿರ್ಮಾಣವನ್ನೆ ಬಿಎಂಆರ್‌ಸಿಎಲ್ ಕೈಬಿಟ್ಟಿದೆ.
ಹೆಬ್ಬಾಳ ಮತ್ತು ಕೆ.ಆರ್.ಪುರ ನಡುವಿನ ಕಾಮಗಾರಿ ವಿಳಂಬವಾಗಿವೆ. ಫ್ಲೈಓವರ್ ನಿರ್ಮಾಣ, ಅಂಡರ್‌ಪಾಸ್ ಕಾಮಗಾರಿಗಳು ನಿಧಾನಗತಿಯಲ್ಲಿವೆ. ನಾಗವಾರ, ಕೆಂಪಾಪುರ ಸೇರಿ ಕೆಲ ನಿಲ್ದಾಣಗಳ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಜತೆಗೆ ಹೆಬ್ಬಾಳ, ಯಲಹಂಕ, ಟ್ರಂಪೆಟ್ ಇಂಟರ್‌ಚೇಂಜ್‌ನಲ್ಲಿನ ಕಾಮಗಾರಿ ಚುರುಕುಗೊಳಿಸಬೇಕು ಎಂದು ಮೆಟ್ರೋ ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.
ಚುರುಕುಗೊಳಿಸಿ:
ಸಿವಿಲ್ ಕಾಮಗಾರಿ ಪೂರ್ಣಗೊಳಿಸುವ ಕೆಲಸಗಳ ಜೊತೆಗೆ ಎಲೆಕ್ಟ್ರಿಕಲ್ - ಮೆಕ್ಯಾನಿಕಲ್ ಕೆಲಸಗಳನ್ನು ಪ್ರಾರಂಭ ಮಾಡಬೇಕು, ದೊಡ್ಡನೆಕ್ಕುಂದಿ, ಇಸ್ರೋ, ಮಾರತಹಳ್ಳಿ, ಇಬ್ಬಲೂರು ಮತ್ತು ಸಿಲ್ಕ್ ಬೋರ್ಡ್ ನಿಲ್ದಾಣಗಳಲ್ಲಿನ ಸ್ಟೇಷನ್ ಕೆಲಸಗಳನ್ನು ತ್ವರಿತಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಸಬಂಧ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ಉನ್ನತಾಧಿಕಾರಿಗಳು ನಿರ್ಮಾಣದ ಗುತ್ತಿಗೆ ಪಡೆದಿರುವ ಕಂಪನಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಅಡೆತಡೆ ನಿವಾರಿಸಲು ಕ್ರಮ ವಹಿಸಲಾಗುತ್ತಿದೆ. ಈ ಮಾರ್ಗದಲ್ಲಿ ನಿರ್ಮಾಣ ಕಾರ್ಯ ಚುರುಕುಗೊಳಿಸಲು ಇತರೆ ಮಾರ್ಗದಂತೆ ‘ಬಾಕ್ಸ್ ಗರ್ಡರ್’ ಬಳಸದೆ ಉದ್ದದ ‘ಯು ಗರ್ಡರ್’ ಬಳಸಲಾಗುತ್ತಿದೆ. ಎಂದು ಪ್ರತಿಕ್ರಿಯಿಸಿದ್ದಾರೆ.
ನೀಲಿ ಮಾರ್ಗದ ಸ್ವರೂಪ:
₹ 15131 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ (2ಎ-19.75ಕಿಮೀ) ಹಾಗು ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (2ಬಿ - 38.44ಕಿಮೀ) ಎರಡು ಹಂತದಲ್ಲಿ ನಿರ್ಮಾಣ ಆಗುತ್ತಿದೆ. 2ಎ ಹಂತವು 13 ನಿಲ್ದಾಣ ಹೊಂದಲಿದ್ದು, ಬೈಯಪ್ಪನಹಳ್ಳಿಯಲ್ಲಿ ಡಿಪೋ ಇದೆ. ಎಲಿವೆಟೆಡ್ ಕಾರಿಡಾರ್ ಇದಾಗಲಿದೆ. 2ಬಿ ಹಂತ 16 ನಿಲ್ದಾಣ, ಶೆಟ್ಟಿಗೇರಿ ಡಿಪೋ ಹೊಂದಲಿದೆ. ಎಲಿವೆಟೆಡ್ ಕಾರಿಡಾರ್ ಇದಾಗಿದ್ದು, ಏರ್‌ಪೋರ್ಟ್ ಬಳಿ ಭೂಗತ ಮಾಗ್, ನಿಲ್ದಾಣ ಆಗುತ್ತಿದೆ.
ಪರಿಷ್ಕೃತ ಡೆಡ್‌ಲೈನ್
ಮಾರ್ಗ ಅವಧಿ
ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್.ಪುರ - 2026 ಸೆಪ್ಟೆಂಬರ್
ಹೆಬ್ಬಾಳ - ಕೆಐಎ - 2027 ಜೂನ್
ಕೆ.ಆರ್.ಪುರ-ಹೆಬ್ಬಾಳ - 2027 ಡಿಸೆಂಬರ್