ಅನರ್ಹರ ಬಿಪಿಎಲ್‌ ರದ್ದು ಪರ ಸಚಿವರ ಬ್ಯಾಟಿಂಗ್‌ - ಅರ್ಹರ ಕಾರ್ಡು ರದ್ದಾದ್ರೆ ಗ್ಯಾರಂಟಿ ಟೀಂ ಸರಿಪಡಿಸುತ್ತೆ: ಡಿಕೆಶಿ

ಸಾರಾಂಶ

ಅನರ್ಹರ ಬಿಪಿಎಲ್‌ ಕಾರ್ಡುಗಳನ್ನು ರದ್ದುಪಡಿಸುವ ಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ್‌, ಸಂತೋಷ್‌ ಲಾಡ್‌, ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದು, ಬಡತನ ರೇಖೆಗಿಂತ ಕೆಳಗಿರುವವರು ಆತಂಕ ಪಡಬೇಕಿಲ್ಲ. ಅಂತಹ ಅರ್ಹರ ಕಾರ್ಡುಗಳು ರದ್ದಾಗುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು :  ಅನರ್ಹರ ಬಿಪಿಎಲ್‌ ಕಾರ್ಡುಗಳನ್ನು ರದ್ದುಪಡಿಸುವ ಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ್‌, ಸಂತೋಷ್‌ ಲಾಡ್‌, ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದು, ಬಡತನ ರೇಖೆಗಿಂತ ಕೆಳಗಿರುವವರು ಆತಂಕ ಪಡಬೇಕಿಲ್ಲ. ಅಂತಹ ಅರ್ಹರ ಕಾರ್ಡುಗಳು ರದ್ದಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ, ಒಂದು ವೇಳೆ ಯಾವುದಾದರೂ ಅರ್ಹರ ಬಿಪಿಎಲ್‌, ಅಂತ್ಯೋದಯ ಕಾರ್ಡು ರದ್ದಾದಲ್ಲಿ ಮುಂದಿನ ದಿನಗಳಲ್ಲಿ ಮನೆ ಮನೆಗೆ ಬರುವ ಸರ್ಕಾರದ ಸ್ಥಳೀಯ ಗ್ಯಾರಂಟಿ ತಂಡದಿಂದ ಸರಿಪಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಗುರುವಾರ ವಿವಿಧೆಡೆ ಪ್ರತ್ಯೇಕವಾಗಿ ಮಾತನಾಡಿದ ಅವರು, ನಮ್ಮ ಸರ್ಕಾರ ಇರುವುದೇ ಬಡವರ ಪರವಾಗಿ. ಯಾವುದೇ ನೈಜ ಬಡವರಿಗೆ ಅನ್ಯಾಯ ಆಗುವುದಿಲ್ಲ. ಆತಂಕ ಬೇಡ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲು ರದ್ದಾದ ಬಿಪಿಎಲ್‌ ಕಾರ್ಡುಗಳ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ಕಳುಹಿಸುತ್ತೇವೆ. ಅವರು ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಇರುವ ಸ್ಥಳೀಯ ಸಮಿತಿಗಳ ಟೀಂ ಮಾಡುತ್ತಾರೆ. ಆ ತಂಡ ಮನೆ ಮನೆಗೆ ಬರುತ್ತದೆ. ಒಂದು ವೇಳೆ ಯಾವುದಾದರೂ ಅರ್ಹರ ಕಾರ್ಡು ರದ್ದಾಗಿದ್ದ ಪಕ್ಷದಲ್ಲಿ ಅಂತಹವರಿಗೆ ಮತ್ತೆ ಬಿಪಿಎಲ್‌ ಕಾರ್ಡು ಕೊಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಎಂಬಿಪಾಗೆ ಬಿಪಿಎಲ್‌ ಕಾರ್ಡು ಬೇಕಾ?

ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಬೇರೆ ರಾಜ್ಯಗಳಲ್ಲಿ ಶೇ.40ರಷ್ಟು ಕುಟುಂಬಗಳಿಗೆ ಮಾತ್ರ ಬಿಪಿಎಲ್‌ ಕಾರ್ಡು ನೀಡಿದ್ದರೆ. ನಮ್ಮ ರಾಜ್ಯದಲ್ಲಿ ಶೇ.80ರಷ್ಟು ಕುಟುಂಬಗಳು ಪಡೆದುಕೊಂಡಿವೆ. ಆದಾಯ ತೆರಿಗೆ ಕಟ್ಟುವವರು, 7.5 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿರುವವರು, ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ವಾಣಿಜ್ಯ ವಾಹನ ಹೊಂದಿರುವವರೂ ಪಡೆದುಕೊಂಡಿದ್ದಾರೆ. ರೀತಿ ನಿಯಮ ಮೀರಿ ಬಿಪಿಎಲ್‌ ಕಾರ್ಡು ಪಡೆದಿರುವವರನ್ನು ಪರಿಶೀಲಿಸಿ ರದ್ದುಪಡಿಸಲಾಗುತ್ತಿದೆ. ಉದಾಹರಣೆಗೆ ಆದಾಯ ತೆರಿಗೆ ಕಟ್ಟುವ ಎಂ.ಪಿ.ಪಾಟೀಲ್‌ಗೆ ಬಿಪಿಎಲ್‌ ಕಾರ್ಡು ಬೇಕಾ? ಅರ್ಹರು ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.

ಬಿಜೆಪಿಯವರು ಚಾಳಿ ಬಿಡಲ್ಲ:

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿಪಿಎಲ್‌ ಕಾರ್ಡ್‌ ರದ್ದು ವಿಚಾರದಲ್ಲಿ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ತಮ್ಮ ಚಾಳಿ ಬಿಡೋದಿಲ್ಲ. ಮುಡಾ, ವಕ್ಫ್‌ ಆಯ್ತು ಈಗ ಬಿಪಿಎಲ್‌ ಕಾರ್ಡು ಹಿಡಿದುಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಬಡವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಒಂದು ವೇಳೆ ಯಾವುದಾದರೂ ಬಡವರಿಗೆ ಅನ್ಯಾಯ ಆದರೆ ಕ್ಷೇತ್ರದ ಜನಪ್ರತಿನಿಧಿಗಳಾದ ನಮ್ಮ ಗಮನಕ್ಕೆ ಬಂದೇ ಬರುತ್ತದೆ. ಆಗ ಅಂತಹವರ ಕಾರ್ಡನ್ನು ವಾಪಸ್‌ ಕೊಡಿಸುವ ಕೆಲಸ ಮಾಡುತ್ತೇವೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.

 ಕಾರ್ಮಿಕರ ಕಾರ್ಡು ಪರಿಶೀಲನೆ ಇಲ್ಲ:  

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ರಾಜ್ಯದಲ್ಲಿ ಗರಿಷ್ಠ ಶೇ.15 ರಷ್ಟು ಕಾರ್ಡುಗಳು ರದ್ದಾಗಬಹುದು. ಅದಕ್ಕಿಂತ ಹೆಚ್ಚು ರದ್ದಾಗುವುದಿಲ್ಲ. ಯಾವುದೇ ಅರ್ಹರ ಕಾರ್ಡುಗಳು ರದ್ದಾಗುವುದಿಲ್ಲ. ಆತಂಕ ಬೇಡ. ನಮ್ಮ ಕಲಘಟಗಿಯಲ್ಲಿ 400 ಕಾರ್ಡ್ ರದ್ಧಾಗಿವೆ. ಅವುಗಳನ್ನು ಮತ್ತೆ ಪರಿಶೀಲಿಸುತ್ತೇವೆ. ಯಾವುದಾದರೂ ನೈಜವಾಗಿರುವವರು ಇದ್ರೆ ವಾಪಸ್ ಕೊಡುತ್ತೇವೆ. ಕಾರ್ಮಿಕರ ಕಾರ್ಡುಗಳ ಪರಿಶೀಲನೆ ಮಾಡಲ್ಲ. ಅರ್ಜಿ ಹಾಕಿದ ಕಾರ್ಮಿಕರ ಮನೆಗೆ ಹೋಗಿ ನಾವೇ ಖುದ್ದು ಪರಿಶೀಲಿಸಿ ಕಾರ್ಡು ಮಾಡಿಸಿಕೊಡುತ್ತೇವೆ ಎಂದರು.

Share this article