ಗುತ್ತಿಗೆ ಕಾಮಗಾರಿ, ಖರೀದಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಿಗೆ ಸಂಪುಟ ಅಸ್ತು

Published : Mar 15, 2025, 07:43 AM IST
Vidhan soudha

ಸಾರಾಂಶ

 2 ಕೋಟಿ ರು.ವರೆಗಿನ ಗುತ್ತಿಗೆ ಕಾಮಗಾರಿಗಳು ಹಾಗೂ 1 ಕೋಟಿ ರು. ವರೆಗಿನ ಖರೀದಿ, ಸೇವೆಗಳಲ್ಲಿ ಮುಸ್ಲಿಮರಿಗೆ (2ಬಿ) ಶೇ.4 ರಷ್ಟು ಮೀಸಲಾತಿ ಸೇರಿ ಎಸ್ಸಿ,ಎಸ್ಟಿ, ಪ್ರವರ್ಗ-1, 2-ಎ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕೆಟಿಟಿಪಿ ಕಾಯ್ದೆ 1999ರ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ 

  ಬೆಂಗಳೂರು  : ರಾಜ್ಯದಲ್ಲಿ 2 ಕೋಟಿ ರು.ವರೆಗಿನ ಗುತ್ತಿಗೆ ಕಾಮಗಾರಿಗಳು ಹಾಗೂ 1 ಕೋಟಿ ರು. ವರೆಗಿನ ಖರೀದಿ, ಸೇವೆಗಳಲ್ಲಿ ಮುಸ್ಲಿಮರಿಗೆ (2ಬಿ) ಶೇ.4 ರಷ್ಟು ಮೀಸಲಾತಿ ಸೇರಿ ಎಸ್ಸಿ,ಎಸ್ಟಿ, ಪ್ರವರ್ಗ-1, 2-ಎ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕೆಟಿಟಿಪಿ ಕಾಯ್ದೆ 1999ರ ತಿದ್ದುಪಡಿ ವಿಧೇಯಕಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಈ ಮೊದಲೇ 1 ಕೋಟಿ ರು.ವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.17.15, ಪರಿಶಿಷ್ಟ ಪಂಗಡಗಳಿಗೆ ಶೇ. 6.95, ಪ್ರವರ್ಗ-1 ಕ್ಕೆ ಶೇ.4, 2ಎಗೆ ಶೇ.15 ಮೀಸಲಾತಿ ಕಲ್ಪಿಸಲಾಗಿತ್ತು. ಇದೀಗ ಮಾ.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಆಯವ್ಯಯ ಭಾಷಣದಲ್ಲಿ 1 ಕೋಟಿ ರು. ಮಿತಿಯನ್ನು 2 ಕೋಟಿ ರು.ಗೆ ಹೆಚ್ಚಳ ಮಾಡಲಾಗಿದೆ. ಜತೆಗೆ ಈ ಎಲ್ಲಾ ಪ್ರವರ್ಗಗಳಿಗೆ (ಎಸ್ಸಿ,ಎಸ್ಟಿ, ಪ್ರವರ್ಗ-1, 2ಎ, 2ಬಿ) 1 ಕೋಟಿ ರು.ವರೆಗಿನ ಖರೀದಿ ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಘೋಷಿಸಿದ್ದರು.

ಈ ಮೀಸಲಾತಿ ಅರ್ಹರ ಪಟ್ಟಿಗೆ ಹೊಸದಾಗಿ ಮುಸ್ಲಿಮರನ್ನು (2ಬಿ) ಸೇರಿಸಿ ಗುತ್ತಿಗೆ ಕಾಮಗಾರಿಗಳಲ್ಲಿ ಹಾಗೂ ಖರೀದಿ, ಸೇವೆಗಳಲ್ಲಿ ಶೇ.4ರಷ್ಟು ಮೀಸಲಾತಿ ಒದಗಿಸುವುದಾಗಿ ಪ್ರಕಟಿಸಿದ್ದರು. ಆಯವ್ಯಯವು ಸದನದ ಅಂಗೀಕಾರ ಪಡೆಯುವ ಮೊದಲೇ ಬಜೆಟ್ ಘೋಷಣೆ ಅನುಷ್ಠಾನಗೊಳಿಸಲು ಬಜೆಟ್ ಅಧಿವೇಶನದಲ್ಲೇ ತಿದ್ದುಪಡಿ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ.

ತಿದ್ದುಪಡಿಗಳೇನು?: ಕೆಟಿಟಿಪಿ ಕಾಯಿದೆ 1999ರ ಕಲಂ 6ರಲ್ಲಿ ಮೀಸಲಾತಿ ಒದಗಿಸಿದ್ದ ಕಾಮಗಾರಿ ಮಿತಿಯನ್ನು 1 ಕೋಟಿ ರು. ಬದಲಾಗಿ 2 ಕೋಟಿ ರು. ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಮೀಸಲಾತಿಗೆ ಅರ್ಹ ಸಮುದಾಯಗಳ ಪಟ್ಟಿಯಲ್ಲಿ 2ಎ ಜತೆಗೆ 2ಬಿ ಎಂದು ಸೇರಿಸಿ ಶೇ.4ಷ್ಟು ಮೀಸಲಾತಿ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ 2ಬಿ ಪ್ರಮಾಣಪತ್ರ ಪಡೆಯಲು ಆದಾಯ ಮಿತಿ ವಿಧಿಸುವಂತಿಲ್ಲ ಎಂದೂ ಹೇಳಲಾಗಿದೆ.

ಕೆಟಿಟಿಪಿ ತಿದ್ದುಪಡಿ ವಿಧೇಯಕ-2025: ಸರ್ಕಾರದ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು, ಸೇವೆಗಳಲ್ಲಿ 1ಕೋಟಿ ರು.ವರೆಗಿನ ಖರೀದಿಗಳಲ್ಲಿ ಮೀಸಲಾತಿ ಕಲ್ಪಿಸುವ ಕುರಿತ ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ-2025ಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದನ್ನು ಪ್ರಸಕ್ತ ಅಧಿವೇಶನದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ತಾಪಂ, ಗ್ರಾಪಂ, ಮುನ್ಸಿಪಲ್‌ ಕೌನ್ಸಿಲ್‌, ಪಪಂ, ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ 2 ಲಕ್ಷ ರು. ಹಾಗೂ ಸರಕು ಸಾಮಗ್ರಿಗೆ 1 ಲಕ್ಷ ರು.ಗೆ ಮಾತ್ರ ವಿನಾಯ್ತಿ ಇತ್ತು. ಬೆಲೆ ಏರಿಕೆ ಪರಿಗಣಿಸಿ ಇದನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. ==

ಯಾವ್ಯಾವ ವರ್ಗಕ್ಕೆ ಎಷ್ಟೆಷ್ಟು ಮೀಸಲಾತಿ? ಗುತ್ತಿಗೆ ಕಾಮಗಾರಿಗಳು ಹಾಗೂ ಖರೀದಿ, ಸೇವೆಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.17.15, ಪರಿಶಿಷ್ಟ ಪಂಗಡಗಳಿಗೆ ಶೇ.6.95, ಪ್ರವರ್ಗ-1ಕ್ಕೆ ಶೇ. 4, 2ಎಗೆ ಶೇ.15, 2ಬಿ (ಮುಸ್ಲಿಮರು) ಶೇ.4 ರಷ್ಟು ಮೀಸಲಾತಿ ಒದಗಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ