ಟೂರಿಸಂ ಅಭಿವೃದ್ಧಿಗೆ ಕ್ಯಾಸಿನೋ ಸಲಹೆ ಒಪ್ಪಲ್ಲ

Published : Jul 04, 2024, 05:42 AM IST
HK Patil

ಸಾರಾಂಶ

ಕ್ಯಾಸಿನೋದಂತಹ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ಸಲಹೆಗಳನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರು  :  ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ, ಸಾರ್ವಜನಿಕರು ಮತ್ತು ಖಾಸಗಿ ಪಾಲುದಾರಿಕೆ ಅಗತ್ಯ. ಈ ನಿಟ್ಟಿನಲ್ಲಿ ಯಾರುಬೇಕಾದರೂ ಉತ್ತಮ ಸಲಹೆ, ಅಭಿಪ್ರಾಯಗಳನ್ನು ನೀಡಬಹುದು. ಆದರೆ, ಕ್ಯಾಸಿನೋದಂತಹ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ಸಲಹೆಗಳನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯು ಬುಧವಾರ ನಗರದ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2024-29’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆದಾಯ ಹೆಚ್ಚಿಸುವ ಉದ್ದೇಶದಿಂದ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಹಾಗೆಂದ ಮಾತ್ರಕ್ಕೆ ಕ್ಯಾಸಿನೋ ನಡೆಸುವುದಕ್ಕೆ ಅನುಮತಿ ನೀಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಅಂತಹಾ ಸಲಹೆಗಳನ್ನು ಸರ್ಕಾರ ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಲಿದೆ ಎಂದರು.

ಪರಿಷ್ಕೃತ ಪ್ರವಾಸೋದ್ಯಮ ನೀತಿಯು ರಾಜ್ಯವನ್ನು ಉನ್ನತ ಶ್ರೇಣಿಯ ಪ್ರವಾಸೋದ್ಯಮವನ್ನಾಗಿಸುವ ವಿಶ್ವಾಸವಿದೆ. ಈ ದಿಸೆಯಲ್ಲಿ ಹೂಡಿಕೆ, ಮೂಲಸೌಕರ್ಯ, ಪರಂಪರೆ, ತಂತ್ರಜ್ಞಾನವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಬಳಕೆ ಮಾಡಲು ಗಮನ ಹರಿಸಲಾಗುತ್ತಿದೆ. ಇದಕ್ಕೆ ಇಲಾಖೆ, ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆ ಒಟ್ಟಾಗಿ ಹೆಜ್ಜೆ ಇಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾವು ಕೇವಲ ರಾಜಕಾರಣಿಗಳು, ಅಧೀಕಾರಿಗಳ ಸಭೆ ನಡೆಸಿ ನೀತಿ ರೂಪಿಸುತ್ತಿಲ್ಲ. ಸಾರಿಗೆ ಸಂಸ್ಥೆಗಳು, ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರು, ವ್ಯಾಪಾರಿಗಳ ಸಂಘಟನೆಗಳು, ತಜ್ಞರು, ಪ್ರವಾಸಿ ತಾಣಗಳ ಸಾರ್ವಜನಿಕ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲ ಪಾಲುದಾರರನ್ನೂ ಒಳಗೊಂಡು ಅವರ ಸಲಹೆ, ಅಭಿಪ್ರಾಯಗಳನ್ನು ಪಡೆದು ನೀತಿ ರೂಪಿಸಲಾಗುವುದು. ಈ ಕಾರಣಕ್ಕಾಗಿಯೇ ಕಾರ್ಯಾಗಾರ ಆಯೋಜಿಸಲಾಗಿದೆ. ಸಂಬಂಧಿಸಿದ ಎಲ್ಲರೂ ಸಲಹೆ, ಅಭಿಪ್ರಾಯ, ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇತ್ತೀಚೆಗೆ ಜನರು ಐಷಾರಾಮಿ ಪ್ರವಾಸಕ್ಕೆ ಮಹತ್ವ ನೀಡುತ್ತಿದ್ದಾರೆ. ಇದರ ಒತೆಗೆ ನಮ್ಮ ರಾಜ್ಯದ ಉತ್ಕೃಷ್ಠ ಕಲೆ, ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ತಾಣ, ಸ್ಮಾರಕಗಳು, ಕರಾವಳಿ, ಕಡಲತೀರ, ಅರಣ್ಯ, ಜಲಪಾತ, ವನ್ಯಜೀವಿ ಸಂಪತ್ತು ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸಬೇಕಿದೆ. ಅಲ್ಲದೆ, ಮಕ್ಕಳಿಗೆ ಶೈಕ್ಷಣಿಕ ಪ್ರವಾಸದಲ್ಲಿ ಜ್ಞಾನ, ಶಿಕ್ಷಣ, ಮನರಂಜನೆ, ಸಂಸ್ಕೃತಿಯ ಅರಿವು ಮೂಡಿಸಬೇಕು. ಧಾರ್ಮಿಕ, ಶೈಕ್ಷಣಿಕ, ಕೃಷಿ ಮತ್ತು ಸಾಹಸಿ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಬೇಕು. ಕರಾವಳಿ ಕ್ರೀಡೆಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಕರಾವಳಿ ಪ್ರದೇಶದ ಅಭಿವೃದ್ಧಿ ನಮ್ಮ ಮಹತ್ವಾಕಾಂಕ್ಷೆಯಾಗಿದೆ. ಒಟ್ಟಾರೆ ಎಲ್ಲ ದಿಕ್ಕಿನಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದರು.

ರಾಜ್ಯದಲ್ಲಿನ ಸ್ಮಾರಕಗಳು ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿವೆ. ಇವುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮವಹಿಸಿದೆ. ಈಗಾಗಲೇ 12 ಸ್ಮಾರಕಗಳನ್ನು ದತ್ತು ನೀಡುವ ಮೂಲಕ ರಕ್ಷಣೆಯ ಕೆಲಸ ಆರಂಭವಾಗಿದೆ. ವಿಶ್ವ ಪಾರಂಪರಿಕ ತಾಣಗಳ ಮೂಲ ಸೌಕರ್ಯ ಇನ್ನಷ್ಟು ಅಭಿವೃದ್ಧಿಗೆ ಒತ್ತು ನೀಡಬೇಕು. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್‌, ನಿರ್ದೇಶಕ ಡಾ. ರಾಮಪ್ರಸಾದ್‌ ಮನೋಹರ್‌, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್‌ ಚಿಕ್ಕಮಾದು ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ