)
ನವದೆಹಲಿ : ರೀತ್ಯ ಮತ್ತು ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ರಾಜ್ಯದ ಮಾವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿರುವ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಅಡಿಯಲ್ಲಿ 1.30 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಪ್ರತಿ ಕ್ವಿಂಟಲ್‌ಗೆ ₹1,750 ಸಹಾಯಧನ ಘೋಷಿಸಿದೆ.
ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರು ಕಳೆದ ವಾರ ಕೋಲಾರ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿ, ಸರ್ಕಾರದ ನೆರವಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಜೂನ್ 17ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು. ಕುಮಾರಸ್ವಾಮಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಚೌಹಾಣ್, ಮಾವು ಬೆಳೆಗಾರರಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.
ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯ ಮಾರ್ಗಸೂಚಿಯಂತೆ ಪ್ರಸಕ್ತ ಹಂಗಾಮಿನಲ್ಲಿ ತೋತಾಪುರಿ ಮಾವಿಗೆ ಬೆಲೆ ಕೊರತೆ ಪಾವತಿ ಜಾರಿಗೆ ಬರಲಿದೆ. ಗರಿಷ್ಠ 1.30 ಲಕ್ಷ ಮೆಟ್ರಿಕ್ ಟನ್ ವರೆಗೆ ಅನ್ವಯವಾಗುವಂತೆ ಪ್ರತಿ ಕ್ವಿಂಟಲ್‌ಗೆ ₹1,750 ಸಹಾಯಧನ ಘೋಷಣೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ.
ಕೇಂದ್ರ ಸರ್ಕಾರದ ಈ ನೆರವಿನಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಧಾರವಾಡ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ.
ನೆರವು ಘೋಷಿಸಿದ್ದಕ್ಕಾಗಿ ಚೌಹಾಣ್ ಅವರಿಗೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.
ಇದಕ್ಕಾಗಿ ಕೇಂದ್ರ ಕೃಷಿ ಸಚಿವರಿಗೆ ಧನ್ಯವಾದ ತಿಳಿಸಿರುವ ಎಚ್‌ಡಿಕೆ, ‘ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷಿ ಸಚಿವರು, ಅತ್ಯಂತ ತ್ವರಿತವಾಗಿ ಮಾವು ಬೆಳೆಗಾರರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅವರ ಸ್ಪಂದನೆಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ರೈತರನ್ನು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಂತಹ ಸಂಕಷ್ಟಗಳಿಂದ ಸಕಾಲದಲ್ಲಿ ಪಾರು ಮಾಡಲು ಕೇಂದ್ರ ಸರ್ಕಾರವು ಅವಿರತವಾಗಿ ಶ್ರಮಿಸುತ್ತಿದೆ ಮತ್ತು ಅದಕ್ಕೆ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.