;Resize=(412,232))
ನವದೆಹಲಿ: ಬಹುನಿರೀಕ್ಷಿತ ಬಳ್ಳಾರಿ-ಗುಂತಕಲ್(ಆಂಧ್ರ) ನಡುವಿನ ರೈಲ್ವೆ ಮಾರ್ಗವನ್ನು 3 ಮತ್ತು 4 ಪಥಗಳಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡಿದೆ. ಸುಮಾರು 46 ಕಿ.ಮೀ. ಉದ್ದದ ಈ ₹1,264 ಕೋಟಿ ಯೋಜನೆಯನ್ನು 2028-29ರಲ್ಲಿ ಪೂರ್ಣಗೊಳಿಸುವ ಗುರಿ ಇದೆ.
ಯೋಜನೆಯು ರೈಲ್ವೆಯ ಸಾಮರ್ಥ್ಯವೃದ್ಧಿ, ಸರಕು ಹಾಗೂ ಪ್ರಯಾಣಿಕರ ಸಾಗಣೆ ಸುಧಾರಿಸುವುದು ಮತ್ತು ಪಿಎಂ ಗತಿ ಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್‌ನಡಿ ಎರಡೂ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ ಬಲಪಡಿಸುವ ಗುರಿ ಹೊಂದಿದೆ. ಈ ಮಲ್ಟಿ ಟ್ರ್ಯಾಕಿಂಗ್ ಯೋಜನೆ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ 99 ಗ್ರಾಮಗಳ ನಡುವೆ ಸಂಪರ್ಕ ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಯೋಜನೆಯಿಂದ ಬಳ್ಳಾರಿ ಕೋಟೆ, ಕುಮಾರಸ್ವಾಮಿ ದೇವಸ್ಥಾನ ಸೇರಿ ಹಲವು ಪ್ರವಾಸಿ ತಾಣಗಳಿಗೂ ರೈಲ್ವೆ ಸಂಪರ್ಕವನ್ನು ಇನ್ನಷ್ಟು ಸುಧಾರಿಸಲಿದೆ. ಪಶ್ಚಿಮ ಕರಾವಳಿ ಜತೆಗೆ ಆಂಧ್ರದ ಸಂಪರ್ಕವನ್ನು ಸುಲಭಗೊಳಿಸುತ್ತದೆ. ಲಾಜಿಸ್ಟಿಕ್ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಕಬ್ಬಿಣದ ಅದಿರು, ಡಾಲಮೈಟ್, ಸುಣ್ಣಲ ಕಲ್ಲು, ಕಬ್ಬಿಣ, ಸ್ಟೀಲ್, ಕಲ್ಲಿದ್ದಲು, ಗೊಬ್ಬರ, ಆಹಾರ ಧಾನ್ಯಗಳಂಥ ಅಗತ್ಯ ವಸ್ತುಗಳು, ಖನಿಜಗಳ ಸಾಗಣೆಗೂ ಇದು ಮಹತ್ವದ ಮಾರ್ಗವಾಗಿದೆ. ಈ ರೈಲ್ವೆ ಮಾರ್ಗದ ಸಾಮರ್ಥ್ಯವೃದ್ಧಿಯಿಂದ ಹೆಚ್ಚುವರಿ ಸರಕು ಸಾಗಣೆ ರೈಲುಗಳ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.