ವಿವಾಹದಾಸೆ ತೋರಿಸಿ ಬ್ರಾಹ್ಮಣ ಸ್ತ್ರಿಯರಿಗೆ ವಂಚನೆ: ಸೆರೆ

ಸಾರಾಂಶ

ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕನ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್‌ನಲ್ಲಿ ವಿವಾಹ ಆಗುವುದಾಗಿ ನಂಬಿಸಿ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕನ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್‌ನಲ್ಲಿ ವಿವಾಹ ಆಗುವುದಾಗಿ ನಂಬಿಸಿ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ನಿವಾಸಿ ದೀಪಕ್ ಬಂಧಿತನಾಗಿದ್ದು, ಆರೋಪಿಯಿಂದ ₹90 ಸಾವಿರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗೆ ವಿವಾಹವಾಗುವುದಾಗಿ ನಂಬಿಸಿ ₹30 ಸಾವಿರ ಪಡೆದು ದೀಪಕ್ ಟೋಪಿ ಹಾಕಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ವಿವಾಹ ವಿಚ್ಛೇದಿತ 45 ವರ್ಷದ ಮಹಿಳೆಯೊಬ್ಬಳಿಗೆ ವಂಚಿಸಲು ಆಕೆಯ ಮನೆಯಲ್ಲೇ ಠಿಕಾಣಿ ಹೂಡಿದ್ದ ದೀಪಕ್‌ನನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

40 ರಿಂದ 45 ವಯಸ್ಸಿನವರೇ ದೀಪಕ್‌ ಗುರಿ:

ಪಿಯುಸಿ ವಿದ್ಯಾರ್ಹತೆ ಹೊಂದಿದ್ದ ಹುಳಿಯಾರಿನ ದೀಪಕ್‌ ಕೆಲಸವಿಲ್ಲದೆ ಅಲೆಯುತ್ತಿದ್ದ. ಬೆವರು ಹರಿಸದೆ ಹಣ ಸಂಪಾದಿಸಲು ಅಡ್ಡದಾರಿ ತುಳಿದ ಈತ, ಮೊದಲು ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಗೆ ಟೋಪಿ ಹಣ ಸಂಪಾದಿಸುತ್ತಿದ್ದ. ತರುವಾಯ ಶಾದಿ ಡಾಟ್ ಕಾಂನಲ್ಲಿ ಬ್ರಾಹ್ಮಣ ಸಮುದಾಯದ ವಿಧವೆಯರು, ವಿವಾಹ ವಿಚ್ಛೇದಿತರು ಹಾಗೂ ಮದುವೆ ವಯಸ್ಸು ಮೀರಿದ ಮಹಿಳೆಯರು ಅದರಲ್ಲೂ 40ರಿಂದ 45 ವರ್ಷ ವಯಸ್ಸಿನವರನ್ನೇ ಗುರಿಯಾಗಿಸಿಕೊಂಡು ಆತ ವಂಚಿಸುತ್ತಿದ್ದ.

ಕೆಲ ತಿಂಗಳಿಂದ ಈ ವಂಚನೆ ಕೃತ್ಯದಲ್ಲಿ ಆತ ತೊಡಗಿದ್ದು, ಹತ್ತಾರು ಮಹಿಳೆಯರಿಗೆ ದೀಪಕ್ ಮೋಸ ಮಾಡಿರುವ ಶಂಕೆ ಇದೆ. ಇದುವರೆಗೆ 8 ಸಂತ್ರಸ್ತೆಯರು ಪತ್ತೆಯಾಗಿದ್ದಾರೆ. ಆದರೆ ಹಣ ಕಳೆದುಕೊಂಡ ಕೆಲವರು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ವಂಚನೆ?

ಶಾದಿ ಡಾಟ್‌ ಕಾಂನ ಬ್ರಾಹ್ಮಣ ಸಮುದಾಯದ ಮೀಸಲಾದ ತಾಣದಲ್ಲಿ ನಕಲಿ ಪೋಟೋ ಬಳಸಿ ತಾನು ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕ. ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ದೀಪಕ್ ಬಯೋಡಾಟಾ ಆಪ್‌ಲೋಡ್ ಮಾಡಿದ್ದ. ಈ ವಿವರ ಗಮನಿಸಿ ಪ್ರತಿಕ್ರಿಯಿಸುವ ಮಹಿಳೆಯರಿಗೆ ನಾಜೂಕಿನ ಮಾನಾಡಿ ಮರಳು ಮಾಡಿ ತನ್ನ ಮೋಸದ ಜಾಲಕ್ಕೆ ಆತ ಬಳಸಿಕೊಳ್ಳುತ್ತಿದ್ದ. ಮದುವೆಗೆ ಒಪ್ಪಿದ ಮಹಿಳೆಯರಿಗೆ ತುರ್ತಾಗಿ ಹಣ ಬೇಕಿದೆ ಎಂದು ಹೇಳಿ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಳ್ಳುತ್ತಿದ್ದ ದೀಪಕ್‌, ಈ ಹಣ ಸಂದಾಯವಾದ ಕೂಡಲೇ ಸಂಪರ್ಕ ಕಡಿದುಕೊಳ್ಳುತ್ತಿದ್ದ.

ಇದೇ ರೀತಿ ಜೆ.ಪಿ.ನಗರ ಬಳಿ ನೆಲೆಸಿರುವ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯಿಂದ ₹30 ಸಾವಿರ ಹಾಗೂ ಸಿಮ್ ಪಡೆದು ಆರೋಪಿ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಾಗ ಆತ ಬಾದಾಮಿಯಲ್ಲಿರುವ ಸಂಗತಿ ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಲಾಯಿತು. ಬಾದಾಮಿಯಲ್ಲಿ 45 ವರ್ಷದ ವಿವಾಹ ವಿಚ್ಛೇದಿತ ಮಹಿಳೆಗೆ ಎರಡನೇ ಮದುವೆ ನೆಪದಲ್ಲಿ ₹2 ಲಕ್ಷ ಪಡೆದು ವಂಚಿಸಲು ದೀಪಕ್ ಸಜ್ಜಾಗಿರುವಾಗಲೇ ಸಿಕ್ಕಿಬಿದ್ದ ಎಂದು ಪೊಲೀಸರು ಹೇಳಿದ್ದಾರೆ.

Share this article