;Resize=(412,232))
ಬೆಂಗಳೂರು : ಪನ್ನೀರ್ ಸೇರಿದಂತೆ ಯಾವುದೇ ಆಹಾರ ಪದಾರ್ಥಗಳ ಕೃತಕ ಉತ್ಪಾದನೆ ಮತ್ತು ಮಾರಾಟಕ್ಕೆ ಈಗಾಗಲೇ ನಮ್ಮ ಕಾನೂನಿನಲ್ಲಿ ನಿಷೇಧವಿದೆ. ಯಾವುದೇ ಕಂಪನಿಗಳು ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಎಚ್ಚರಿಸಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀಸ್, ಪನ್ನೀರ್, ಬೆಣ್ಣೆ ಮಾತ್ರಲ್ಲ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಲು, ಮಾರಾಟ ಮಾಡಲು ರಾಜ್ಯದ ಕಾಯ್ದೆ, ಕಾನೂನಿನಲ್ಲಿ ಅವಕಾಶವಿಲ್ಲ. ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಲು ನಿಷೇಧ ಹೇರಲಾಗಿದೆ. ಅಂತಹ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿವುದು ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಮತ್ತೊಂದು ವಿಶೇಷ ಆದೇಶವನ್ನೂ ಶೀಘ್ರ ಹೊರಡಿಸಲಾಗುವುದು ಎಂದು ಹೇಳಿದರು.
ನಮಗೆ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮುಖ್ಯ. ಸ್ಟಾರ್ ಹೋಟೆಲ್, ಸಾಮಾನ್ಯ ಹೋಟೆಲ್ ಅಥವಾ ಇಂದಿರಾ ಕ್ಯಾಂಟೀನ್ ಇರಲಿ ಎಲ್ಲಾ ಕಡೆ ಉತ್ತಮ ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರವನ್ನೇ ಜನರಿಗೆ ನೀಡಬೇಕು. ಹಾಗಾಗಿಯೇ ಎಲ್ಲ ಕಡೆಯೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರು : ನಗರದ ಉತ್ತರ ಪಾಲಿಕೆ ವ್ಯಾಪ್ತಿಯ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ವೈದ್ಯಾಧಿಕಾರಿಗಳ ತಂಡ ಕಸ ವಿಂಗಡಿಸದ ಅಶುಚಿತ್ವ ಉಂಟುಮಾಡಿದ್ದರಿಂದ 1.60 ಲಕ್ಷ ರು. ದಂಡ ವಿಧಿಸಿದ್ದಾರೆ.
ಇಲ್ಲಿನ ಹಯಾತ್ ಸೆಂಟ್ರಿಕ್ ನಲ್ಲಿ ತ್ಯಾಜ್ಯ ವಿಂಗಡಿಸದ ಕಾರಣ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ 40 ಸಾವಿರ ದಂಡ ವಿಧಿಸಲಾಗಿದೆ.
ಪೀಪಾಯ್ ಬ್ರೇವರಿ ಮತ್ತು ಕಿಚನ್‌ಗೆ 80 ಸಾವಿರ ರೂ, ತಲಸೇರಿ ರೆಸ್ಟೋರೆಂಟ್ ಗೆ 20 ಸಾವಿರ ರೂ ದಂಡ ವಿಧಿಸಲಾಗಿದೆ. ಚಿಕ್ ಪೇಟ್ ದೊನ್ನೆ ಬಿರಿಯಾನಿ ಆಹಾರ ಮಳಿಗೆಗೆ 5 ಸಾವಿರ ದಂಡ ವಿಧಿಸಲಾಗಿದೆ. ನಂದನ ಪ್ಯಾಲೇಸ್‌ನಲ್ಲಿ ತ್ಯಾಜ್ಯ ವಿಂಗಡಣೆ ಮಾಡದ ಕಾರಣ 15 ಸಾವಿರ ರು. ದಂಡ ವಿಧಿಸಲಾಗಿದೆ. ಸ್ವಾತಿ ಹೋಟೆಲ್‌ನಲ್ಲಿ ಅನೈರ್ಮಲ್ಯಕರ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.