ಬಾಲ್ಯ ನಿಶ್ಚಿತಾರ್ಥಕ್ಕೆ ಜೈಲು, ₹ 1 ಲಕ್ಷ ದಂಡ

Published : Aug 19, 2025, 09:58 AM IST
Child marriage mandya

ಸಾರಾಂಶ

ರಾಜ್ಯದಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣ ನಿಷೇಧಿಸುವ ಉದ್ದೇಶದೊಂದಿಗೆ ಮತ್ತಷ್ಟು ಕಠಿಣ ನಿಯಮಗಳನ್ನೊಳಗೊಂಡ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕವನ್ನು ಸೋಮವಾರ ಅಂಗೀಕರಿಸಲಾಯಿತು.

 ವಿಧಾನಸಭೆ :  ರಾಜ್ಯದಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣ ನಿಷೇಧಿಸುವ ಉದ್ದೇಶದೊಂದಿಗೆ ಮತ್ತಷ್ಟು ಕಠಿಣ ನಿಯಮಗಳನ್ನೊಳಗೊಂಡ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ವಿಧೇಯಕವನ್ನು ಸೋಮವಾರ ಅಂಗೀಕರಿಸಲಾಯಿತು.

ವಿಧೇಯಕ ಮಂಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, 2024-25ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರವೇ 1,828 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ 1,260 ಪ್ರಕರಣಗಳನ್ನು ತಡೆಯಲಾಗಿದೆ. ಕಠಿಣ ಕಾನೂನಿದ್ದರೂ 369 ಬಾಲ್ಯ ವಿವಾಹಗಳು ನಡೆದಿವೆ. ಹೀಗಾಗಿ ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶದೊಂದಿಗೆ ಕಠಿಣ ನಿಯಮಗಳೊಂದಿಗೆ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಬಾಲ್ಯ ವಿವಾಹಕ್ಕೆ ನಿಶ್ಚಿತಾರ್ಥ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದರೆ 1 ಲಕ್ಷ ರು. ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು. ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ದೇವದಾಸಿ ಪದ್ಧತಿ ನಿಷೇಧದ ವಿಧೇಯಕ ಪಾಸ್‌:

ದೇವದಾಸಿಯಂಥ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ವಿಧೇಯಕವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಂಡಿಸಿದರು. ವಿಧೇಯದಲ್ಲಿರುವಂತೆ, ದೇವದಾಸಿ ಪದ್ಧತಿ ಮೂಲಕ ನೊಂದವರಿಗೆ ಸಮಗ್ರ ಪುನರ್ವಸತಿ ಕಲ್ಪಿಸುವುದಕ್ಕೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಅದರ ಜತೆಗೆ ಶಿಕ್ಷಣ, ಆರೋಗ್ಯ ಮತ್ತು ಪರವಾನಗಿಗಳು, ಪಾಸ್‌ಪೋರ್ಟ್‌, ಪಾನ್‌ಕಾರ್ಡ್‌, ಪಡಿತರ ಚೀಟಿ ಸೇರಿ ಇನ್ನಿತರ ಸೌಲಭ್ಯ ಪಡೆಯುವ ಅರ್ಜಿ ಸಲ್ಲಿಸುವಾಗ ತಂದೆ ಹೆಸರು ಘೋಷಿಸುವುದು ಕಡ್ಡಾಯ. ಆದರೆ, ದೇವದಾಸಿ ಮಗುವಿಗೆ ತನ್ನ ತಂದೆ ತಿಳಿದಿಲ್ಲ ಎಂಬ ವಿಚಾರದಲ್ಲಿ ಹಲವು ತಾರತಮ್ಯ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರಿನ ಭಾಗ ತುಂಬುವುದು ಕಡ್ಡಾಯವಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ.

ಹಾಗೆಯೇ, ಪ್ರತಿ ದೇವದಾಸಿ ಮಹಿಳೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಹಕ್ಕು ಹೊಂದಲಿದ್ದು, ಅದನ್ನು ಸರ್ಕಾರ ಒದಗಿಸಬೇಕು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಬಹುಮಹಡಿ ಕಟ್ಟಡಕ್ಕೆ ಶೇ.1ರಷ್ಟು ಅಗ್ನಿಶಾಮಕ ಕರ:

ಬಹುಮಹಡಿ ಕಟ್ಟಡಗಳಿಗೆ ಹೆಚ್ಚುವರಿ ಉಪಕರ ವಿಧಿಸುವ ಕರ್ನಾಟಕ ಅಗ್ನಿಶಾಮಕದಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ನೂತನ ತಿದ್ದುಪಡಿಯಂತೆ ರಾಜ್ಯದಲ್ಲಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಶೇ.1ರಷ್ಟನ್ನು ಹೆಚ್ಚುವಾರಿ ಅಗ್ನಿಶಾಮಕ ಉಪಕರ ವಿಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಈ ತಿದ್ದುಪಡಿ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಹುಮಹಡಿ ಕಟ್ಟಡಗಳಿಗೆ ಶೇ.1ರಷ್ಟು ಉಪಕರ ವಿಧಿಸುವಷ್ಟು ಸರ್ಕಾರ ಪಾಪರ್‌ ಆಗಿದೆಯೇ. ಈ ಕ್ರಮದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಕುಸಿಯುತ್ತದೆ ಎಂದರು.

ಅದಕ್ಕೆ ಉತ್ತರಿಸಿದ ಸಚಿವ ಎಚ್‌.ಕೆ. ಪಾಟೀಲ್‌, ಈ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಕೊನೆಗೆ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು

PREV
Read more Articles on

Recommended Stories

ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌
ರಾಜ್ಯಾದ್ಯಂತ ಏಕರೂಪದ ಹಾಲು ದರ ಖರೀದಿ ನಿಗದಿಗಾಗಿ ಒತ್ತಾಯ