;Resize=(412,232))
ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿಐಡಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ.
ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಐಎಎಸ್ ಅಧಿಕಾರಿ ವಿರುದ್ಧ ದೋಷಾರೋಪಟ್ಟಿ ಸಲ್ಲಿಕೆಗೆ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ಕೋರಿ ರಾಜ್ಯ ಸರ್ಕಾರಕ್ಕೆ ಸಿಐಡಿ ಮನವಿ ಮಾಡಿತ್ತು. ಈ ಕೋರಿಕೆಗೆ ಸಮ್ಮತಿ ಸೂಚಿಸಿರುವ ಮುಖ್ಯಮಂತ್ರಿ ಅವರು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ ಎಂದು ಗುಡುಗಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಯುವ ಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪುಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ ಎಂದು ಮುಖ್ಯಮಂತ್ರಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜ್ಞಾನೇಂದ್ರ ಇದ್ದು, ಅವರ ಬಂಧನವಾಗಿ 90 ದಿನದೊಳಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಇಲ್ಲದೆ ಹೋದರೆ ಆರೋಪಿಗೆ ಜಾಮೀನು ಪಡೆಯಲು ಅವಕಾಶ ಸಿಗಲಿದೆ. ಹೀಗಾಗಿ ಈ ಹಗರಣದ ಎಸ್‌ಐಟಿ ರಚನೆ ಸಂಬಂಧ ನ್ಯಾಯಾಲಯದ ಹಂತದಲ್ಲಿರುವಾಗಲೇ ಜ್ಞಾನೇಂದ್ರ ಕುಮಾರ್ ವಿರುದ್ಧ ದೋಷಾರೋಪಟ್ಟಿ ಸಲ್ಲಿಕೆಗೆ ಸಿಐಡಿ ತಯಾರಿ ನಡೆಸಿದೆ. ಈ ಸಂಬಂಧ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿ ಸರ್ಕಾರಕ್ಕೆ ಸಿಐಡಿ ಮನವಿ ಮಾಡಿತ್ತು. ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಚುರುಕಾದ ಸಿಐಡಿ, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಜ್ಞಾನೇಂದ್ರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
2023ರಲ್ಲಿ ರಾಜ್ಯ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಇಲಾಖೆಗೆ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ನಡೆಸಿತ್ತು. ಆ ವೇಳೆ ಆಯೋಗದಲ್ಲಿ ಜ್ಞಾನೇಶ್ ಪರೀಕ್ಷಾ ನಿಯಂತ್ರಕರಾಗಿದ್ದರು. ಆಗ ಪಶುವೈದ್ಯ ಹುದ್ದೆಗಳನ್ನು ಆಯೋಗದ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯರು ಹಾಗೂ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಜತೆ ಸೇರಿ ಜ್ಞಾನೇಂದ್ರ ಮಾರಾಟ ಮಾಡಿದ್ದ ಆರೋಪ ಬಂದಿದೆ. ಈ ಹಗರಣದಲ್ಲಿ ಆ.29 ರಂದು ಜ್ಞಾನೇಂದ್ರ ಬಂಧನವಾಗಿತ್ತು. ಬಳಿಕ ಅವರ ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಂಧನವಾಯಿತು.
ಈ ಮಧ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ಹೈಕೋರ್ಟ್ ಆದೇಶಿಸಿತು. ಆದರೆ ಈ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಸಿಐಡಿ ನಡೆಸಿರುವ ಹಂತದಿಂದ ಮುಂದುವರೆದ ತನಿಖೆಯನ್ನು ಎಸ್‌ಐಟಿ ನಡೆಸುವಂತೆ ಆದೇಶಿಸಿತು. ಅಲ್ಲದೆ ಎಸ್ಐಟಿ ತಂಡಕ್ಕೆ ಅಧಿಕಾರಿಗಳ ಹೆಸರನ್ನು ಸರ್ಕಾರ ನೀಡಿ ಹೈಕೋರ್ಟ್ ನಿರ್ಣಯಿಸಲಿದೆ ಎಂದು ಹೇಳಿದೆ. ಈಗ ಎಸ್ಐಟಿ ರಚನೆಗೆ ಸರ್ಕಾರದಲ್ಲಿ ಚರ್ಚೆ ನಡೆದಿದೆ. ಈ ಮಧ್ಯೆ ಮೊದಲ ಹಂತದ ತನಿಖೆ ಆಧರಿಸಿ ಜ್ಞಾನೇಂದ್ರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಐಡಿ ಮುಂದಾಗಿದೆ.
ಕೆಪಿಎಸ್ಸಿ ಹಗರಣ ಸಂಬಂಧ ಜ್ಞಾನೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ಅನುಮತಿಯನ್ನು ಸಿಐಡಿ ಕೇಳಿರುವ ಬಗ್ಗೆ ‘ಕನ್ನಡಪ್ರಭ’ ಮಾತ್ರ ಅ.17ರಂದು ವರದಿ ಮಾಡಿತ್ತು.