ಎಲ್ರಿಗೂ ನ್ಯಾಯ ಸಿಕ್ಕಿದೆಯೇ, ಗೊತ್ತಾಗಬೇಕು : ಸಿಎಂ ಸಿದ್ದರಾಮಯ್ಯ

Published : Sep 20, 2025, 11:41 AM IST
CM Siddaramaiah

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ನಮ್ಮ ಸಮಾಜದಲ್ಲಿ ಯಾರಿಗೆ ನ್ಯಾಯ ಸಿಕ್ಕಿದೆ? ಯಾರಿಗೆ ಇನ್ನೂ ಸಿಕ್ಕಿಲ್ಲ ಎನ್ನುವುದು ಗೊತ್ತಾಗಬೇಕು.

  ಬೆಂಗಳೂರು :  ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ನಮ್ಮ ಸಮಾಜದಲ್ಲಿ ಯಾರಿಗೆ ನ್ಯಾಯ ಸಿಕ್ಕಿದೆ? ಯಾರಿಗೆ ಇನ್ನೂ ಸಿಕ್ಕಿಲ್ಲ ಎನ್ನುವುದು ಗೊತ್ತಾಗಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಪರಿಕಲ್ಪನೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ನಗರದ ವಾರ್ತಾಸೌಧದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿ’, ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಎಸ್.ಗಿರೀಶ್ ಬಾಬು ಅವರಿಗೆ ‘2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಶೇಷ ಯೋಜನೆಗಳ ವಿಭಾಗದ ಸಂಪಾದಕ ವಿನೋದ್ ಕುಮಾರ್ ಬಿ. ನಾಯ್ಕ್ ಅವರಿಗೆ ‘2019ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’ ಸೇರಿ 15 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ತಪ್ಪು ಎನ್ನಬೇಕು. ತಪ್ಪಿಲ್ಲದಿದ್ದರೂ ತಪ್ಪು ಎನ್ನಬಾರದು. ಆರೋಪ ಮಾಡುವಾಗ ಸತ್ಯ, ಮಿಥ್ಯ ಪರಿಶೀಲಿಸಬೇಕು. ಸರ್ಕಾರ ಮಾಡುವುದೆಲ್ಲವೂ ಸರಿ ಎಂದು ನಾನು ಹೇಳುವುದಿಲ್ಲ. ಆದರೆ, ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಜನಪರ ಇಲ್ಲದಿದ್ದರೆ ಅದೇ ರೂಪದಲ್ಲೇ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಪತ್ರಕರ್ತರಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿ ಬಂದಿದೆ ಎಂದು ಸುಮ್ಮನಾಗದೆ ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು. ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. 2017ರಿಂದಲೂ ಮಾಧ್ಯಮದ ಈ ಪ್ರಶಸ್ತಿಗಳನ್ನು ಕೊಟ್ಟಿರಲಿಲ್ಲ. ಈ ವರ್ಷ ಎಲ್ಲಾ ಪ್ರಶಸ್ತಿಗಳನ್ನು ನಮ್ಮ ಸರ್ಕಾರ ನೀಡಿದೆ. ಮುಂದಿನ ದಿನಗಳಲ್ಲಿ ಆಯಾ ವರ್ಷದ ಪ್ರಶಸ್ತಿಗಳು ಅದೇ ವರ್ಷ ಪ್ರದಾನ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ 2024ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ, ವಿಜಯಲಕ್ಷ್ಮೀ ಶಿಬರೂರು, ಬಿ.ಎಂ.ಟಿ ರಾಜೀವ್, ವಿನೋದ್‌ ಕುಮಾರ್ ಬಿ.ನಾಯ್ಕ್, ಮಾಲತೇಶ ಅಂಗೂರ, ಸುಧೀರ್ ಶೆಟ್ಟಿ, ಮಲ್ಲಿಕಾರ್ಜುನ ಹೊಸಪಾಳ್ಯ, ಆರ್.ಮಂಜುನಾಥ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಚೀ.ಜ. ರಾಜೀವ್, ದೇವಯ್ಯ ಗುತ್ತೇದಾರ್, ಗಿರೀಶ್ ಲಿಂಗಣ್ಣ, ಎಂ.ಎನ್. ಯೋಗೇಶ್, ನೌಶಾದ್ ಬಿಜಾಪುರ, ಜಿ.ಟಿ. ಸತೀಶ್ ಹಾಗೂ ಎಸ್. ಗಿರೀಶ್ ಬಾಬು ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಶಿವಕುಮಾರ್, ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಉಪಸ್ಥಿತರಿದ್ದರು.

PREV
Read more Articles on

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌