ಬೆಂಗಳೂರು : ಜಿಎಸ್‌ಟಿ ಸರಳೀಕರಣದ ನಿರ್ಧಾರದಿಂದ ರಾಜ್ಯಕ್ಕೆ 15,000 ದಿಂದ 20,000 ಕೋಟಿ ರು. ನಷ್ಟ ಉಂಟಾಗಲಿದೆ. ಆದರೂ ಜನಸಾಮಾನ್ಯರ ಮೇಲಿನ ಆರ್ಥಿಕ ಭಾರ ತಗ್ಗಿಸುವ ಸಲುವಾಗಿ ಈ ನಿರ್ಧಾರ ಸ್ವಾಗತಿಸುತ್ತೇವೆ. ಆದರೆ, ಈ ಲಾಭ ಬಳಕೆದಾರರಿಗೆ ನೀಡದೆ ವ್ಯಾಪಾರಿಗಳು, ಉದ್ಯಮಿಗಳು ದುರುಪಯೋಗ ಮಾಡಿಕೊಳ್ಳದಂತೆ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಎಸ್‌ಟಿ ಸರಳೀಕರಣ ಎಂಬುದು ಮೋದಿ ಸರ್ಕಾರದ ಹೊಸ ಅವಿಷ್ಕಾರವೇನಲ್ಲ. ಅತ್ಯಂತ ಅವಸರದಲ್ಲಿ ಎನ್‌ಡಿಎ ಸರ್ಕಾರ 2017ರಲ್ಲಿ ದೋಷಪೂರ್ಣ ಜಿಎಸ್‌ಟಿ ಜಾರಿಗೊಳಿಸಿದಾಗಲೇ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರು ಸುಧಾರಣೆಗೆ ಒತ್ತಾಯಿಸಿದ್ದರು. ಗಬ್ಬರ್ ಸಿಂಗ್ ತೆರಿಗೆ ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶ ಮಾಡಿದ್ದನ್ನು ಸಾಕ್ಷ್ಯಸಹಿತ ಬಹಿರಂಗಪಡಿಸಿದ್ದರು. ಕೊನೆಗೂ ಮೋದಿ ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಾಸ್ತವದಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿದೆ. ಇದೀಗ ರಾಜ್ಯಗಳ ಒತ್ತಾಯದಿಂದ ಜಿಎಸ್‌ಟಿ ಸರಳೀಕರಣಕ್ಕೆ ಮುಂದಾಗಿದ್ದಾರೆ. ಜಿಎಸ್ಟಿ ಸುಧಾರಣೆಯ ಲಾಭ ಬಳಕೆದಾರ ಜನತೆಗೆ ತಲುಪುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಜವಾಬ್ದಾರಿ. ಈ ತೆರಿಗೆ ಸುಧಾರಣೆಯನ್ನು ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಲಾಭಾಂಶ ಹೆಚ್ಚಿಸಲು ದುರುಪಯೋಗ ಮಾಡದಂತೆ ಕೇಂದ್ರ ತಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿಎಸ್ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.