ಮುಡಾ ಕೇಸಲ್ಲಿ ಬಿ.ರಿಪೋರ್ಟ್‌ ಹಾಕಿಸಿಕೊಳ್ಳಲು ಸಿದ್ಧರಾಗಿದ್ದ ಸಿಎಂಗೆ ಆಘಾತ: ವಿಜಯೇಂದ್ರ

Published : Jan 28, 2025, 10:16 AM IST
BY vijayendraa

ಸಾರಾಂಶ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಬಿ ರಿಪೋರ್ಟ್‌ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊಡ್ಡ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

 ಬೆಂಗಳೂರು : ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಬಿ ರಿಪೋರ್ಟ್‌ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊಡ್ಡ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನೋಟಿಸ್‌ ಕೊಡದಿದ್ದರೂ ಸಿದ್ದರಾಮಯ್ಯನವರ ಬಾಮೈದ ಮೈಸೂರಿನ ಲೋಕಾಯುಕ್ತ ಕಚೇರಿಗೆ ರಾತ್ರಿ 8-9 ಗಂಟೆಗೆ ಭೇಟಿ ಕೊಡುತ್ತಿದ್ದರು. ಮುಖ್ಯಮಂತ್ರಿಗಳ ಕುಟುಂಬಕ್ಕೆ ಎಷ್ಟು ಮುಕ್ತ ವ್ಯವಸ್ಥೆ ಇತ್ತೆಂದು ಈ ಮೂಲಕ ಬಹಿರಂಗವಾಗಿದೆ ಎಂದು ಟೀಕಿಸಿದರು.

ಸಿಎಂಗೆ ಆಘಾತ: ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಪಾದಯಾತ್ರೆ ನಡೆಸಿದವು. ನಮ್ಮ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳ ಪತ್ನಿ 14 ನಿವೇಶನ ಹಿಂತಿರುಗಿಸುತ್ತೇವೆ ಎಂದು ರಾತ್ರೋರಾತ್ರಿ ಮುಡಾಗೆ ಪತ್ರ ಬರೆದಿದ್ದರು. ಆ ಪತ್ರದ ಮೂಲಕ ಮೂಲಕ ಹಗರಣದಿಂದ ಹೊರಕ್ಕೆ ಬಂದ ಭ್ರಮೆಯಲ್ಲಿ ಮುಖ್ಯಮಂತ್ರಿಗಳಿದ್ದರು. ಆದರೆ, ಇದೀಗ ಇ.ಡಿ ನೋಟಿಸ್‌ನಿಂದಾಗಿ ಆಘಾತವಾಗಿರುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಇ.ಡಿಗೆ ಅದರದ್ದೇ ಆದ ನಿಯಮಗಳಿರುತ್ತವೆ. ಅದರ ಪ್ರಕಾರ ಸಂಸ್ಥೆ ಮುಂದುವರೆಯುತ್ತದೆ. ಇ.ಡಿ ನೋಟಿಸ್ ರಾಜಕೀಯಪ್ರೇರಿತ ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಡವರ ಪಾಲಾಗಬೇಕಾದ ಸಾವಿರಾರು ಕೋಟಿ ರು. ಮೌಲ್ಯದ ನಿವೇಶನಗಳ ಅಕ್ರಮ ಹಂಚಿಕೆ ನಡೆದಿತ್ತು. ಈ ದೊಡ್ಡ ಹಗರಣದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಸಿದ್ದರಾಮಯ್ಯನವರು ಆತುರಾತುರವಾಗಿ ಲೋಕಾಯುಕ್ತ ಸಂಸ್ಥೆಯಿಂದ ಬಿ ರಿಪೋರ್ಟ್ ಪಡೆದು ಹಗರಣದಿಂದ ಹೊರಕ್ಕೆ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದರು. ಆದರೆ, ಅವರ ಪತ್ನಿಗೂ ಇ.ಡಿ ನೋಟಿಸ್ ಕೊಟ್ಟು ತನಿಖೆಗೆ ಹಾಜರಾಗಲು ತಿಳಿಸಿದೆ ಎಂದರು.

ಮುಖ್ಯಮಂತ್ರಿಗಳ ಪತ್ನಿ ಜತೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‍ ಅವರಿಗೂ ಇ.ಡಿ ನೋಟಿಸ್ ಕೊಟ್ಟಿದೆ. ಹಾಗಾಗಿ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಪತ್ನಿ ಅವರೂ ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಡಿಕೆಶಿ ಮುಖದಲ್ಲಿ ಮಂದಹಾಸ: ಬಿವೈವಿ

ಇ.ಡಿ.ನೋಟಿಸ್‌ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಗಮನಿಸಿದ್ದೇನೆ. ಇ.ಡಿ ನೋಟಿಸ್‌ ರಾಜಕೀಯಪ್ರೇರಿತ ಎಂದು ಅವರು ಹೇಳಿದ್ದಾರೆ. ಅವರ ಮುಖದಲ್ಲಿ ಮಂದಹಾಸವೂ ಕಾಣುತ್ತಿತ್ತು. ಅಬ್ಬಾ ಸಿದ್ದರಾಮಯ್ಯನವರ ಕುಟುಂಬಕ್ಕೆ ಇ.ಡಿ ನೋಟಿಸ್ ಕೊಟ್ಟಿದೆ ಎಂಬ ಸಂತೋಷ ಅವರ ಮುಖದಲ್ಲಿತ್ತು ಎಂದು ವಿಜಯೇಂದ್ರ ತಿಳಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...