ಮೈಸೂರು : ‘ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರಲ್ಲಿ ತಪ್ಪೇನಿದೆ? ಸರ್ಕಾರಿ ಜಾಗದಲ್ಲಿ ಅದರ ಚಟುವಟಿಕೆಗೆ ನಿರ್ಬಂಧ ಹಾಕುವಂತೆ ಅವರು ಪತ್ರ ಬರೆದಿದ್ದಾರೆ. ತಮಿಳುನಾಡಿನಲ್ಲಿ ಯಾವ ರೀತಿ ಆರ್‌ಎಸ್‌ಎಸ್‌ಗೆ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಅದನ್ನು ಆಧರಿಸಿ ಮುಂದನ ಕ್ರಮ ಜರುಗಿಸಲಾಗುತ್ತದೆ’ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳುನಾಡು ಮಾದರಿಯಲ್ಲಿ ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಬ್ಯಾನ್ ಮಾಡುವಂತೆ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.
ಇನ್ನೂ ಮೈಸೂರಿನ ನಡೆದ ಬೌದ್ಧ ಮಹಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಯಾವಾಗಲೂ ತಾಕತ್ತಿದ್ದರೆ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎಂದು ಸವಾಲು ಹಾಕುತ್ತಾರೆ. ಕಳೆದ ಚುನಾವಣೆಯಲ್ಲೂ ಅದೇ ಹೇಳಿದ್ದರು. ಆಗ ಅವರ ಸ್ಥಿತಿ ಏನಾಯಿತು ಗೊತ್ತಲ್ಲ’ ಎಂದು ತಿಳಿಸಿದರು.
ಸರ್ಕಾರಿ ಜಾಗಗಳಲ್ಲಿ ಯಾವುದೇ ಸಂಘಟನೆಗಳಿಗೆ ಕಾರ್ಯಕ್ರಮಕ್ಕೆಅವಕಾಶ ಇಲ್ಲ ಎಂಬುದು ತಮಿಳುನಾಡಿನ ನೀತಿಯಾಗಿದ್ದು. ಅದನ್ನು ಪರಾಮರ್ಶಿಸಲಾಗುತ್ತದೆ ಎಂದು ಹಾಸನದಲ್ಲೂ ಸಿಎಂ ನುಡಿದರು.