ಬೆಂಗಳೂರು : ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳೆಗೇರಿ ಪ್ರದೇಶಗಳಿದ್ದು, ಅವುಗಳ ಅಭಿವೃದ್ಧಿ ಆಗಬೇಕೆಂದು ಪ್ರಸ್ತಾಪಿಸಿದರು.
ಆಗ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಈ ಹಿಂದೆ ಶಾಂತಿನಗರದಲ್ಲಿ ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಪ್ರಯತ್ನ ಮಾಡಲಾಗಿತ್ತು. ಅದು ಯಶಸ್ವಿಯಾಗಲಿಲ್ಲ. ಹೀಗಾಗಿ, ಜನರು ಈ ವಿಚಾರದಲ್ಲಿ ಹಿಂಜರಿಯುತ್ತಾರೆ. ಅದಕ್ಕಾಗಿ ಈ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಬೇಕು. ಈ ಕುರಿತು ಜಿಬಿಎ ಅಧಿಕಾರಿಗಳು ಕ್ರಮವಹಿಸಿ ಎಂದು ಸೂಚಿಸಿದರು.
ಶಾಸಕ ಎ.ಸಿ. ಶ್ರೀನಿವಾಸ್, ತಮ್ಮ ಕ್ಷೇತ್ರದಲ್ಲಿ ಕಸ ವಿಲೇವಾರಿ ಸಮಸ್ಯೆ ಇದೆ ಎಂದು ಪ್ರಸ್ತಾಪಿಸಿದರು. ಕಸ ವಿಲೇವಾರಿ ವಿಚಾರವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 33 ಪ್ಯಾಕೇಜ್ ಟೆಂಡರ್ ಕರೆಯಲಾಗುವುದು. ಈ ವಿಚಾರ ನ್ಯಾಯಾಲಯದಲ್ಲಿದ್ದು, ಶೀಘ್ರವೇ ತೀರ್ಪು ಬರಲಿದೆ. ಅಲ್ಲಿಯ ವರೆಗೆ ಕಸ ವಿಲೇವಾರಿ ಜವಾಬ್ದಾರಿ ಸ್ಥಳೀಯ ಪಾಲಿಕೆಗಳು ನಿಭಾಯಿಸಲಿವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಆನೇಕಲ್ ಶಾಸಕ ಶಿವಣ್ಣ, ತಮ್ಮ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಈಗ ಘೋಷಣೆ ಆಗಿರುವ ಜಿಬಿಎ ವ್ಯಾಪ್ತಿಯಲ್ಲಿ ಮೊದಲು ಚುನಾವಣೆ ಆಗಲಿದೆ. ನಂತರ ಎಲ್ಲೆಲ್ಲಿ ಅಭಿವೃದ್ಧಿ ಆಗಿದೆ. ಆ ಜಾಗಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲು ಸಮಿತಿ ರಚಿಸಿ ಯಾವ ಪ್ರದೇಶ ಸೇರಿಸಬೇಕು ಎಂದು ತೀರ್ಮಾನ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಶಾಸಕ ರಿಜ್ವಾನ್ ಅರ್ಷದ್, ನಗರದಲ್ಲಿ ಅನಾಥ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ನಗರದ ಹೊರಗೆ 10 ಎಕರೆ ಪ್ರದೇಶ ಗುರುತಿಸಿ ಅಲ್ಲಿ ಈ ವಾಹನಗಳನ್ನು ಸ್ಥಳಾಂತರ ಮಾಡಬೇಕು ಎಂದು ವಿಚಾರ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಈ ಜಾಗಗಳನ್ನು ಗುರುತಿಸಿ ಅಲ್ಲಿ ಕಾಂಪೌಂಡ್ ಹಾಕಿ ವಾಹನಗಳನ್ನು ಸ್ಥಳಾಂತರಿಸಿ. ಆಗ ಆ ವಾಹನಗಳನ್ನು ಬೇರೆಯವರು ಕದಿಯಲು ಆಗುವುದಿಲ್ಲ ಎಂದು ತಿಳಿಸಿದರು.