ಬಿಜೆಪಿ ವಿರುದ್ಧದ ಶೇ.40 ಕಮಿಷನ್‌ ಆರೋಪದ 20000 ಪುಟದ ತನಿಖಾ ವರದಿ ನ್ಯಾ.ದಾಸ್‌ ಸಮಿತಿಯಿಂದ ಸಲ್ಲಿಕೆ

ಸಾರಾಂಶ

ನ್ಯಾ.ಎಚ್.ಎನ್‌.ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣಾ ಆಯೋಗವು 20,000 ಪುಟಗಳ ಬೃಹತ್‌ ತನಿಖಾ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

 ಬೆಂಗಳೂರು :  ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಮುಖ ಕಾಮಗಾರಿ ನಡೆಸುವ ಐದು ಇಲಾಖೆಗಳಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪ ಕುರಿತ ತನಿಖೆಗೆ ರಚಿಸಲಾಗಿದ್ದ ನ್ಯಾ.ಎಚ್.ಎನ್‌.ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣಾ ಆಯೋಗವು 20,000 ಪುಟಗಳ ಬೃಹತ್‌ ತನಿಖಾ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

2019ರ ಜು.26 ರಿಂದ 2023ರ ಮಾ.31ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಶೇ.40 ರಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಪ್ರಮುಖ ಚುನಾವಣಾ ಪ್ರಚಾರ ಅಸ್ತ್ರವಾಗಿ ಬಳಕೆ ಮಾಡಿತ್ತು.

ಇದೀಗ ನಾಗಮೋಹನ್‌ದಾಸ್‌ ಅವರು ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ವರದಿ ಸಲ್ಲಿಕೆ ಮಾಡಿದ್ದಾರೆ. ಅಧಿವೇಶನ ನಡೆಯುತ್ತಿರುವ ಅವಧಿಯಲ್ಲೇ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ಕುರಿತ ತನಿಖಾ ವರದಿ ಕೈ ಸೇರಿರುವುದು ಸರ್ಕಾರಕ್ಕೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ.

ಐದು ಇಲಾಖೆಗಳ ಬಗ್ಗೆ ತನಿಖೆ:

2019-23ರ ಅವಧಿಯಲ್ಲಿ ಲೋಕೋಪಯೋಗಿ, ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಗಳಲ್ಲಿ ನಡೆದಿರುವ ಬೃಹತ್‌ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಕಮಿಷನ್‌ ಚಾಲ್ತಿಯಲ್ಲಿದೆ ಎಂಬ ಆರೋಪ ಬಗ್ಗೆ ಪ್ರಮುಖವಾಗಿ ತನಿಖೆ ನಡೆಸಲಾಗಿದೆ.

ಜತೆಗೆ ಪ್ಯಾಕೇಜ್‌ ಪದ್ಧತಿ ಕೈಬಿಡುವುದು, ಎಸ್‌.ಆರ್‌.ದರಪಟ್ಟಿ ನಿಗದಿ, ಸ್ಟಾರ್‌ ರೇಟ್ ಪದ್ಧತಿಯ ಜಾರಿ, ಪಾರದರ್ಶಕತೆ ಕಾಪಾಡಿಕೊಳ್ಳುವಿಕೆ, ಸೀನಿಯಾರಿಟಿ ಮೇಲೆ ಬಿಲ್‌ ಪಾವತಿ, ಕೆಆರ್‌ಐಡಿಎಲ್‌ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡಿಕೆ ತಪ್ಪಿಸುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆಯೂ ತನಿಖೆ ನಡೆಸಲು ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಬೇಡಿಕೆ ಸಲ್ಲಿಸಿತ್ತು.

ಈ ಸಂಬಂಧ ವಿಚಾರಣಾ ಆಯೋಗವು ಎಲ್ಲಾ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿವರವಾದ ಅಧ್ಯಯನ ಮಾಡಿ ತನಿಖೆ ನಡೆಸಿ ಪ್ರಸ್ತುತ ವರದಿ ಸಲ್ಲಿಸಿದೆ.

ಈ ಬಗ್ಗೆ ''ಕನ್ನಡಪ್ರಭ'' ಜತೆ ಮಾತನಾಡಿರುವ ನಾಗಮೋಹನ್‌ದಾಸ್‌, ಇದೊಂದು ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಿಸಿದ ಆರೋಪವಾಗಿರುವುದರಿಂದ ಸಾರ್ವಜನಿಕರ ಹೇಳಿಕೆಗಳು ಮತ್ತು ವಿವರಗಳು ಬಹುಮುಖ್ಯ ಎಂಬುದನ್ನು ಮನಗಂಡು ಇದಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳೊಂದಿಗೆ ವರದಿ ತಯಾರಿಸಲಾಗಿದೆ ಎಂದು ತಿಳಿಸಿದರು.

Share this article